ಕಾಗದ : -

ಸಾರಗುಂದಿದ (ಡೈಲ್ಯೂಟ್) ನೀರಿನಲ್ಲಿ ತೇಲುತ್ತಿರುವ ಮತ್ತು ನವುರಾದ ಸೂಕ್ಷ್ಮ ತಂತಿ ಬಲೆಯಮೇಲೆ ಹಾಸಿದ ಸೆಲ್ಯುಲೋಸ್ ಎಳೆಗಳ ಹಾಳೆಯಿಂದ ನೀರನ್ನು ಹಿಂಗಿಸಿ ಬಲೆಯನ್ನು ತೆಗೆದು ಒಣಗಿಸಿದಾಗ ದೊರೆಯುವ ಪೊರೆ (ಪೇಪರ್). ಇದು ಮೊದಲಿದ್ದ ಅರ್ಥ. ಇಂದು ಕಾಗದ ಶಬ್ದದ ಅರ್ಥ ವಿಶೇಷವಾದ ವಿಸ್ತರಿಸಿದೆ-ಬಂಧಗೊಂಡ ಖನಿಜದ ಅಥವಾ ಸಂಶ್ಲೇಷಿತ ಎಳೆಗಳಿಂದ ರಚಿತವಾದ ಪೊರೆಯೇ ಕಾಗದ ಎನ್ನಿಸಿಕೊಂಡಿದೆ. ಹೀಗಿದ್ದರೂ ಕಾಡಿನಿಂದ ಕಾಗದ ಎನ್ನುವಷ್ಟರಮಟ್ಟಿಗೆ ಕಾಗದದ ಕೈಗಾರಿಕೆ ಅರಣ್ಯ ಸಂಪತ್ತನ್ನು ಅವಲಂಬಿಸಿದೆ. ಸೆಲ್ಯುಲೋಸ್ ಎಂಬ ರಾಸಾಯನಿಕ ವಸ್ತುವಿರುವ ಮರ, ಬಿದಿರು, ಚಿಂದಿಬಟ್ಟೆ, ಕಬ್ಬಿನಹಿಪ್ಪೆ, ಹುಲ್ಲು ಕೃಷಿಯಲ್ಲಿನ ಶೇಷ ವಸ್ತುಗಳು ಮತ್ತು ಹಳೆಯ ಕಾಗದವೇ ಅದಕ್ಕೆ ಬೇಕಾದ ಕಚ್ಚಾವಸ್ತುಗಳು.

 ನೈಲ್‍ನದಿಯ ಪಾತ್ರದ ಅಕ್ಕಪಕ್ಕಗಳಲ್ಲಿ ಪಾಪಿರಸ್ ಎಂಬ ಎತ್ತರವಾದ ಜೊಂಡಿನಂಥ ಹುಲ್ಲು ಬೆಳೆಯುವುದು. ಕ್ರಿ.ಪೂ. 2500-2000 ಅವಧಿಯಲ್ಲಿ ಈ ಹುಲ್ಲಿನಿಂದ ಬರೆಯಲು ಯೋಗ್ಯವಾದ ಹಾಳೆಗಳನ್ನು ತಯಾರಿಸುವ ಕ್ರಮ ಮೊದಲಾಯಿತು. ಆದ್ದರಿಂದ ಇದಕ್ಕೆ ಪೇಪರ್ ಎಂದು ಹೆಸರು ಬಂತು. ಸುಮಾರು 2000 ವರ್ಷಗಳ ಹಿಂದೆ ಮಲ್ಬರಿ ಗಿಡದ ತೊಗಟೆಯಿಂದ ಮೊದಲು ಕಾಗದ ತಯಾರಿಸಿದವನು ಕ್ಸಿಲುನ್ ಎಂಬ ಚೀನೀ ಕುಶಲಕರ್ಮಿ. ಈ ತೊಗಟೆಯನ್ನು ನೀರಿನಲ್ಲಿ ನೆನೆಹಾಕಿ ಅರೆದು ರುಬ್ಬಿದ ತಿರುಳನ್ನು ನೀರಿನೊಂದಿಗೆ ತೆಳುಗೊಳಿಸಿ ತಂತಿಯ ಬಟ್ಟೆಯ ಮೂಲಕ ಶೋಧಿಸಿದಾಗ ನೀರು ಸೋರಿಹೋಗಿ ನವುರಾದ ಕಾಗದದ ಹಾಳೆ ಅದರ ಮೇಲೆ ಉಳಿಯುತ್ತಿತ್ತು. ಅದನ್ನು ಬಿಸಿಲಿನಲ್ಲಿ ಒಣಗಿಸಿ ನಾಗರಿಕ ಪ್ರಪಂಚಕ್ಕೆ ಮೊದಲ ಕಾಗದದ ಹಾಳೆಯ ಕಾಣಿಕೆಯಿತ್ತವನು ಆತ. ವಾಸ್ತವವಾಗಿ ಕ್ರಿ.ಶ. 150ರ ಸುಮಾರಿನಲ್ಲಿ ಕೈಗಾರಿಕಾ ಪ್ರಮಾಣದಲ್ಲಿ ಕಾಗದದ ಉತ್ಪಾದನೆ ಪ್ರಾರಂಭವಾದುದೂ ಚೀನೀಯರಿಂದಲೇ. ಹದಿನಾಲ್ಕನೆಯ ಶತಮಾನದ ಅಂತ್ಯದ ಹೊತ್ತಿಗೆ ಕಾಗದ ಉತ್ಪಾದನ ವಿಧಾನದಲ್ಲಿ ಸುಧಾರಣೆಗಳಾಗಿದ್ದು ದಕ್ಷಿಣ ಯೂರೋಪಿನಲ್ಲೆಲ್ಲ ಅದು ಪರಿಚಿತವಾಗಿತ್ತು. ಇಷ್ಟಾದರೂ ಅಮೆರಿಕೆಯಲ್ಲಿ ಮೊದಲ ಕಾಗದದ ಕಾರ್ಖಾನೆ ಸ್ಥಾಪಿತವಾದದ್ದು 1690ರಲ್ಲಿ.

 ಕಾಗದದ ಕೈಗಾರಿಕೆಯ ಶೈಶವಾವಸ್ಥೆಯಲ್ಲಿ ಕಚ್ಚಾವಸ್ತುವಾಗಿ ಬಳಸುತ್ತಿದ್ದುದು ಚಿಂದಿ ಬಟ್ಟೆಯನ್ನು ಮಾತ್ರ. ಅದನ್ನು ತೊಳೆದು ಜಲಶಕ್ತಿಯಿಂದ ನಡೆಯುವ ಹಾರೆಗಳಿಂದ ಕುಟ್ಟಿ ಫಲಿತ ವಸ್ತುವಿಗೆ ನೀರು ಸೇರಿಸುತ್ತಿದ್ದರು. ತಂತಿ ಜಾಲರಿಯಿರುವ ಮರದ ಚೌಕಟ್ಟನ್ನು ಪಲ್ಪಿನಲ್ಲಿ ಅದ್ದಿ ಅಲ್ಲಾಡಿಸುತ್ತಿದ್ದರೆ ನೀರೆಲ್ಲ ಸೋರಿ ಹೋಗಿ ಎಳೆಗಳು ಹೆಣೆದುಕೊಂಡು ಹಾಳೆಯಂತಾಗುತ್ತಿತ್ತು. ಈ ಹಾಳೆಗಳನ್ನು ¥sóÉಲ್ಟಿನ ಮೇಲೆ ಪೇರಿಸಿ ಹೆಚ್ಚುವರಿ ನೀರನ್ನು ಒತ್ತಿ ತೆಗೆದು ಒಣಗಿಸಿದರೆ ಕಾಗದವಾಗುತ್ತಿತ್ತು. ಅಂದಿನಿಂದ ಇಂದಿನವರಿಗೆ ಕಾಗದದ ತಯಾರಿಕೆಯಲ್ಲಿ ಅಗಾಧ ಪ್ರಗತಿಯಾಗಿದೆ. ಪಲ್ಪಿನ ತಯಾರಿಕೆಯಲ್ಲಿ ಮತ್ತು ಅದಕ್ಕಾಗಿ ಬಳಸುವ ಯಂತ್ರೋಪಕರಣಗಳಲ್ಲಿ ಸುಧಾರಿತ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಾಗದದ ಕೈಗಾರಿಕೆಯಲ್ಲಿ ಮೊದಲ ಹಂತವೆಂದರೆ ಸೆಲ್ಯುಲೋಸ್‍ಪ್ರಧಾನವಾದ ವಸ್ತುಗಳಿಂದ ತಿರುಳನ್ನು ರೂಪಿಸಿಕೊಳ್ಳುವುದು. ಈ ವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸೆಲ್ಯುಲೋಸಿನಲ್ಲಿರುವ ಅಂಗಭಾಗಗಳು, ಅದರ ರಾಸಾಯನಿಕ ರಚನೆ ಮತ್ತು ಗುಣಗಳ ಅರಿವು ಅಗತ್ಯ.

 ಸೆಲ್ಯುಲೋಸು ಒಂದು ನೈಸರ್ಗಿಕ ಸಾವಯವ ಬಹ್ವಂಗೀಕೃತ ವಸ್ತು. ಇದು ಎಲ್ಲ ಸಸ್ಯಗಳಲ್ಲೂ ಇದೆ. ಗ್ಲೂಕೋಸಿನ ಅಣುಗಳನ್ನು ಒಳಗೊಂಡ ಬೃಹದಣು. ಅದರ ಅಣುಸೂತ್ರ (ಅ6ಊ10ಔ5)ಟಿ. ಟಿ ಸಂಖ್ಯೆಯ ಬೆಲೆ ಇನ್ನೂ ನಿರ್ಣಯವಾಗಿಲ್ಲ. ಸುಮಾರು 615-3,075 ಇರಬಹುದೆಂದು ಒಂದು ಅಂದಾಜು. ಕೆಲವು ನಮೂನೆ ಸೆಲ್ಯುಲೋಸಿನ ಅಣುತೂಕ 100,000-500,000 ಇರುವುದುಂಟು. ಅತಿಕೇಂದ್ರಾಪಗಮನದ ಸಹಾಯದಿಂದ ಮಾಡಿದ ಪ್ರಯೋಗಗಳ ಪ್ರಕಾರ ಸುಮಾರು 3,600 ಗ್ಲೂಕೋಸಿನ ಅಣುಗಳಿರಬಹುದೆಂದು ಲೆಕ್ಕ ಹಾಕಲಾಗಿದೆ. ಪ್ರತಿಯೊಂದು ಗ್ಲೂಕೋಸ್ ಘಟಕವೂ ಹಿಂದಿನದಕ್ಕೆ ಲಂಬಕೋನದಲ್ಲಿ ಜಂಟಿಯಾಗಿದ್ದು ನೀಳ ಸರಣಿ ರಚನೆಯನ್ನು ಹೊಂದಿರುವುದೆಂದು ಎಕ್ಸ್‍ಕಿರಣಗಳ ಪರೀಕ್ಷೆಯಿಂದ ಗೊತ್ತಾಗಿದೆ. ಸೆಲ್ಯುಲೋಸಿನ ಅಂಗ ರಚನೆ ಮುಂದೆ ತೋರಿಸಿದೆ. (ಪುಟ 428).

 ಸಸ್ಯದ ನಾರಿನ ಭಾಗದಲ್ಲೆಲ್ಲ ಸೆಲ್ಯುಲೋಸ್ ಇರುತ್ತದೆ. ಹತ್ತಿಯನ್ನು ಶುದ್ಧ ಸೆಲ್ಯುಲೋಸ್ ಎಂದೇ ಪರಿಗಣಿಸಬಹುದು. ಸೆಲ್ಯುಲೋಸ್ ಬಿಳಿಯ ಘನವಸ್ತು. ನೀರಿನಲ್ಲಿ ಅದ್ರಾವ್ಯ. ಸಾವಯವ ದ್ರವಗಳಲ್ಲೂ ಲೀನವಾಗುವುದಿಲ್ಲ. ಕ್ಯುಪ್ರಮೋನಿಯಂ ಸಲ್ಫೇಟಿನ ದ್ರಾವಣದಲ್ಲೂ ಜಿûಂಕ್ ಕ್ಲೋರೈಡಿನ ಹೈಡ್ರೊಕ್ಲೋರಿಕಾಮ್ಲದ ದ್ರಾವಣದಲ್ಲೂ ದ್ರಾವ್ಯ. ಈ ತತ್ತ್ವದ ಆಧಾರದ ಮೇಲೆಯೇ ಕೃತಕ ರೇಷ್ಮೆಯನ್ನು ತಯಾರಿಸುವುದು. ಸೋಡಿಯಂ ಹೈಡ್ರಾಕ್ಸೈಡಿನ ಪ್ರಬಲ ದ್ರಾವಣದ ಸಂಪರ್ಕದಲ್ಲಿ ಊದಿಕೊಳ್ಳುತ್ತದೆ; ಮತ್ತು ಧಾರಣಶಕ್ತಿ, ರೇಷ್ಮೆಯ ಹೊಳಪು, ವರ್ಣದ್ರವ್ಯಗಳನ್ನು ಆಕರ್ಷಿಸುವ ಗುಣಗಳು ಪ್ರಾಪ್ತವಾಗುತ್ತವೆ. ಈ ಸಂಸ್ಕರಣಕ್ಕೆ ಮರ್ಸರೈಸೇಷóನ್ ಕ್ರಿಯೆ ಎನ್ನುವರು. ಕೊಂಚ ಸಲ್ಫ್ಯೂರಿಕ್ ಆಮ್ಲದ ಸಂಪರ್ಕದಲ್ಲಿ ಅಸಿಟಿಕ್ ಅನ್‍ಹೈಡ್ರೈಡಿನ ಅಸಿಟಿಕ್ ಆಮ್ಲದ ದ್ರಾವಣದೊಡನೆ ವರ್ತಿಸಿದಾಗ ಸೆಲ್ಯುಲೋಸ್ ಅಸಿಟೇಟ್ ಆಗುವುದು.

 ಇದನ್ನು ಛಾಯಾಗ್ರಾಹಕ ಫಿಲ್ಮುಗಳು ಮತ್ತು ಸೆಲೊಫೇನ್ ಕಾಗದದ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಬಲ ನೈಟ್ರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ವರ್ತನೆಯಿಂದ ಸೆಲ್ಯುಲೋಸ್ ಡೈ ಮತ್ತು ಟ್ರೈನೈಟ್ರೇಟುಗಳು ಬರುವುವು. ಸೆಲ್ಯುಲೋಸ್ ಟ್ರೈನೈಟ್ರೇಟಿಗೆ ತೀವ್ರ ಸ್ಫೋಟಕಗುಣವಿದೆ. ಇದನ್ನೇ ನಾವು ಸಿಡಿಹತ್ತಿ ಎನ್ನುವುದು. ಡೈನೈಟ್ರೇಟಿನ ಆಲ್ಕೊಹಾಲ್ ಅಥವಾ ಈಥರ್ ದ್ರಾವಣವೇ ಕಲೋಡಿಯನ್.

 ಸೆಲ್ಯುಲೋಸಿನ ಅಣುಗಳು ಪರಸ್ಪರ ಅಂಟಿಕೊಂಡು ನಾರಿನಂತಾಗಲು ಮತ್ತು ಈ ಎಳೆಗಳು ಕೂಡಿಕೊಂಡು ಮರದ್ರವ್ಯದಲ್ಲಿರುವ ಕೋಶಗಳಾಗಲು ಲಿಗ್ನಿನ್ ಎಂಬ ಆಗ್ರ್ಯಾನಿಕ್ ವಸ್ತು ಕಾರಣ. ಸೆಲ್ಯುಲೋಸ್ ಮತ್ತು ಲಿಗ್ನಿನ್ ಅಲ್ಲದೆ ಮರದಲ್ಲಿ ಹೆಮಿಸೆಲ್ಯುಲೋಸುಗಳು, ರಾಳಗಳು ಮತ್ತು ವರ್ಣದ್ರವ್ಯಗಳಿವೆ. ಕೆಲವು ಸಂದರ್ಭಗಳಲ್ಲಿ ಸಿಲಿಕಾ ಇತ್ಯಾದಿ ಇನಾಗ್ರ್ಯಾನಿಕ್ ವಸ್ತುಗಳೂ ಇರುವುದುಂಟು. ಮರವನ್ನು ಭೌತ ಅಥವಾ ರಾಸಾಯನಿಕ ಕ್ರಿಯೆಗೆ ಗುರಿಪಡಿಸಿ ಅಂಟು ವಸ್ತುವಾದ ಲಿಗ್ನಿನ್ನನ್ನು ಮೆದುಗೊಳಿಸಿ ಇಲ್ಲವೇ ಕರಗಿಸಿ ಸೆಲ್ಯುಲೋಸನ್ನು ಬಿಡುಗಡೆ ಮಾಡುವುದೇ ಪಲ್ಪಿನ ತಯಾರಿಕೆಯಲ್ಲಿರುವ ತತ್ತ್ವ. ಹೀಗೆ ತಯಾರಿಸಿದ ಪಲ್ಪಿಗೆ ಕಪ್ಪುಛಾಯೆ ಇರುವುದು. ಮರವನ್ನು ರಾಸಾಯನಿಕ ಕ್ರಿಯೆಗೆ ಗುರಿಪಡಿಸಿದಾಗ ಹುಟ್ಟಿದ ಅಥವಾ ಅದರಲ್ಲಿ ಮುಂಚೆಯೇ ಇದ್ದ ವರ್ಣದ್ರವ್ಯಗಳಿಂದ ಹೀಗಾಗುತ್ತದೆ. ಪಲ್ಪನ್ನು ಅಪೇಕ್ಷಿತ ಮಟ್ಟಕ್ಕೆ ಚಲುವೆ ಮಾಡಲು ಅದನ್ನು ಮತ್ತಷ್ಟು ಶುದ್ಧಿಗೊಳಿಸಿ ಉತ್ಕರ್ಷಣ ಅಥವಾ ಅಪಕರ್ಷಣ ಗುಣವುಳ್ಳ ಸೂಕ್ತ ರಾಸಾಯನಿಕ ವಸ್ತುಗಳ ಸಂಪರ್ಕದಲ್ಲಿ ಬಿಡಬೇಕು.

 ಕಚ್ಚಾ ಮರದಿಂದ ಕಾಗದವನ್ನು ರೂಪಿಸುವವರೆಗೆ ಎರಡು ಪ್ರಧಾನ ಹಂತಗಳನ್ನು ಗುರುತಿಸಬಹುದು-ಕಚ್ಚಾ ಮರದಿಂದ ಪಲ್ಪಿನ ತಯಾರಿಕೆ ಮತ್ತು ಪಲ್ಪನ್ನು ಕಾಗದವಾಗಿ ಪರಿವರ್ತಿಸುವುದು. ಮರದ ಪಲ್ಪುಗಳಲ್ಲಿ ಯಾಂತ್ರಿಕ, ಸಲ್ಫೇಟ್, ಸಲ್ಫೈಟ್ ಮತ್ತು ಸೋಡಾ ಪಲ್ಪುಗಳೆಂದು ನಾಲ್ಕು ವಿಧಗಳಿವೆ. ಮೊದಲನೆಯದನ್ನು ಯಾಂತ್ರಿಕ ವಿಧಾನಗಳಿಂದಲೂ ಉಳಿದ ಮೂರನ್ನು ರಾಸಾಯನಿಕವಾಗಿಯೂ ತಯಾರಿಸುವರು. ಸಂಗ್ರಹಣ ಮತ್ತು ಸಾಗಾಣಿಕೆಯ ಕಾಲದಲ್ಲಿ ನಷ್ಟವಾದ ಅಂಶಗಳು ಮತ್ತು ತೊಗಟೆಯನ್ನು ಬಿಟ್ಟರೆ ಮೂಲ ಮರದ್ರವ್ಯದಲ್ಲಿದ್ದುವೆಲ್ಲವೂ ಯಾಂತ್ರಿಕ ಪಲ್ಪಿನಲ್ಲಿರುತ್ತವೆ. ರಾಸಾಯನಿಕ ಪಲ್ಪುಗಳಲ್ಲಿ ಶುದ್ಧ ಸೆಲ್ಯುಲೋಸ್ ಇರುವುದು. ಉತ್ತಮ ದರ್ಜೆಯ ಕಾಗದವನ್ನು ಮಾಡಲು ರಾಸಾಯನಿಕ ಪಲ್ಪಿಗೇ ಹೆಚ್ಚು ಬೇಡಿಕೆಯಿರುವುದು ಈ ಕಾರಣದಿಂದಲೇ, ಪತ್ರಿಕೆಗಳನ್ನು ಮುದ್ರಿಸಲು ಬೇಕಾದ ಅಗ್ಗದ ಕಾಗದದ ಉತ್ಪಾದನೆಗೆ ಇದು ತಕ್ಕುದಲ್ಲ.

 ಕಚ್ಚಾವಸ್ತುಗಳು: ಕಾಗದದ ತಯಾರಿಕೆಗೆ ಬಳಸುವ ಮುಖ್ಯ ಕಚ್ಚಾವಸ್ತುವೆಂದರೆ ಮರ. ಹತ್ತಿ, ಚಿಂದಿಬಟ್ಟೆ ಇತ್ಯಾದಿಗಳನ್ನು ಸಹ ಬಳಸುತ್ತಾರೆ. ಕೈದುಡಿಮೆಯನ್ನು ಬಿಟ್ಟರೆ ಮರದಿಂದ ತೊಗಟೆ ಬಿಡಿಸುವ ಎರಡು ಮುಖ್ಯ ವಿಧಾನಗಳಿವೆ. ನೀರಿನ ತೊಟ್ಟಿಯಲ್ಲಿ ಭಾಗಶಃ ಮುಳುಗಿ ಚಲಿಸುತ್ತಿರುವ ಪೀಪಾಯಿಯೊಂದಿದೆ. ಅದರ ಮೇಲ್ಭಾಗದಿಂದ ಮರದ ತುಂಡುಗಳನ್ನು ಹಾಕುವರು. ಅವುಗಳ ತೊಗಟೆ ಉಜ್ಜಿ ತೆಗೆಯಲ್ಪಟ್ಟು ಶುಭ್ರವಾದ ಮರ ಇನ್ನೊಂದು ಬದಿಯಿಂದ ಹೊರಬೀಳುವುದು. ಎರಡನೆಯ ವಿಧಾನದಲ್ಲಿ ಚದರಂಗುಲಕ್ಕೆ ಸುಮಾರು 1,400 ಪೌಂಡು ಒತ್ತಡ ಬೀಳುವಷ್ಟು ರಭಸದಲ್ಲಿ ನೀರು ಮರದ ಮೇಲೆ ಎರಗುವುದು. ಆಗ ತೊಗಟೆ ಚುಪ್ಪಾಚೂರಾಗಿ ಕಳಚಿ ಬೀಳುತ್ತದೆ. ಆಸ್ಟ್ರಾಮ್ ತೊಗಟೆಯಂತ್ರದ ಕಾರ್ಯವಿದಾನ ಭಿನ್ನವಾಗಿದೆ. ವರ್ತುಲಾಕಾರದಲ್ಲಿ ಸುತ್ತುತ್ತಿರುವ ಸರಪಳಿಯ ಚೌಕಟ್ಟಿನ ಮೂಲಕ ಮರದ ತುಂಡು ಹಾಯುವುದು. ಅದಕ್ಕೂ ಚೌಕಟ್ಟಿಗೂ ಅಲ್ಪ ಅಂತರವಿರುವುದರಿಂದ ತುಂಡು ತಿರುಗದೆ ತೊಗಟೆ ಮಾತ್ರ ತೆಗೆಯಲ್ಪಡುವುದು.

 ಯಾಂತ್ರಿಕ ಪಲ್ಪ್: ಕೋನಿಫರಸ್ ವರ್ಗದ ಮೆದು ಮರಗಳಾದ ಸ್ಪ್ರೂಸ್ ಮತ್ತು ಬಾಲ್ಸಂಗಳನ್ನು ಇದಕ್ಕಾಗಿ ಬಳಸುವುದು ಹೆಚ್ಚು. ಇವನ್ನು ನದಿಯಲ್ಲಿ ತೇಲಿಬಿಟ್ಟು ಕಾರ್ಖಾನೆಯ ನಿವೇಶನಕ್ಕೆ ಸಾಗಿಸುವುದು ಸುಲಭ. ಪಾಪ್ಲರ್ ಮರವಾದರೆ ನೀರಿನಲ್ಲಿ ಮುಳುಗುವುದು. ಗಿರಣಿಯ ಬಳಿ ಬಂದ ಕೂಡಲೇ ಮರದ ದಿಮ್ಮಿಗಳನ್ನು ಕತ್ತರಿಸಿ ಮೇಲೆ ಹೇಳಿದಂತೆ ತೊಗಟೆಯನ್ನು ಸುಲಿಯಲಾಗುವುದು. ಅನಂತರ ಅದನ್ನು ನೀರಿನಲ್ಲಿ ಅರೆಯುವರು ಘರ್ಷಣೆಯಿಂದ ಹುಟ್ಟಿದ ಶಾಖದ ನಿವಾರಣೆಗೆ ಮತ್ತು ಎಳೆಗಳನ್ನು ತೇಲಿಸಿಕೊಂಡು ಹೋಗಲು ನೀರಿದ್ದರೆ ಅನುಕೂಲ. ಸಮಕೋನದಲ್ಲಿ ದಿಮ್ಮಿಗಳನ್ನು ಕತ್ತರಿಸಿದಾಗ ಎಲೆಗಳು ತುಂಡಾಗುವ ಸಂಭವವಿದೆ. ಆದರೆ ಮರದ ತುಂಡನ್ನು ಲಘುಕೋನದಲ್ಲಿ ಕತ್ತರಿಸಿದರೆ ಎಳೆಗಳು ಕಿತ್ತಂತಾಗಿ ಉದ್ದುದ್ದವಾಗಿ ಬರುವುವು. ಸ್ವಲ್ಪ ಮರವನ್ನು ಕತ್ತರಿಸಲು ಮೂರು ಪಾಕೆಟ್ ಗ್ರೈಂಡರ್ ಅನುಕೂಲ. ಇದರಲ್ಲಿ ಉಕ್ಕಿನ ಗೂಟದ ಮೇಲೆ ಕೂರಿಸಿರುವ ಬೀಸುವ ಕಲ್ಲಿದೆ. ಇದರ ಅಂಚಿನಲ್ಲಿ ಮೂರು ಗುಳಿಗಳಿರುತ್ತವೆ. ಒಂದೊಂದು ಗುಳಿಯ ಮೇಲೂ ಹೈಡ್ರಾಲಿಕ್ ಸಿಲಿಂಡರ್ ಇದೆ. ಮರದ ತುಂಡುಗಳನ್ನು ಬೀಸುವ ಕಲ್ಲಿಗೆ ತಾಡಿಸುವುದು ಇದರ ಕರ್ತವ್ಯ. ಘರ್ಷಣೆಯಲ್ಲಿ ಹುಟ್ಟುವ ಶಾಖವನ್ನು ಹೀರಲು ಮತ್ತು ಉತ್ಪನ್ನ ವಸ್ತುವನ್ನು ಕೊಚ್ಚಿಸಿ ತೆಗೆಯಲು ಶ್ವೇತೋದಕವನ್ನು (ವೈಟ್ ವಾಟರ್) ಚಿಮುಕಿಸುತ್ತಿರುವರು. ನೂರಾರು ಟನ್ ಮರಗಳನ್ನು ಪುಡಿ ಮಾಡಬೇಕಾದಾಗ ವಿಶೇಷ ಗಿರಣಿಗಳು ಅಗತ್ಯ. ಜಲಮಿಶ್ರಿತ ಪಲ್ಪು ಒರಳಿನ ಕೆಳಗಿರುವ ಮೋರಿಗಳಲ್ಲಿ ಸಂಗ್ರಹಿಸುತ್ತದೆ. ಇದನ್ನು ಜರಡಿ ಹಿಡಿಯಲಾಗುವುದು. ಸಣ್ಣ ಚೂರುಗಳು ವಂದರಿಯ ಮೂಲಕ ಹಾದು ಒಂದು ಗುಂಡಿಯಲ್ಲಿ ಬೀಳುವುವು. ಇವನ್ನು ಇನ್ನೂ ಸೂಕ್ಷ್ಮವಾದ ವಂದರಿಯಲ್ಲಿ ಆಡಿಸಲಾಗುವುದು. ಅದರ ಮೇಲೆ ಉಳಿದ ತರಿಯನ್ನು ಮತ್ತಷ್ಟು ಪುಡಿ ಮಾಡಿ ಅದೇ ವಂದರಿಗೆ ಹಿಂತಿರುಗಿಸುವರು. ಜರಡಿಯಾಡಿಸಿದ ವಸ್ತುವನ್ನು ಮಂದಕಾರಿಗಳಲ್ಲಿ (ಥಿಕನರ್ಸ್) ಸಾಂದ್ರೀಕರಿಸಲಾಗುವುದು. ಇದೇ ಯಾಂತ್ರಿಕ ಪಲ್ಪ್. ಮಂದಕಾರಿಗಳು ವಿಸರ್ಜಿಸುವ ನೀರಿನಲ್ಲಿ ಮರದಲ್ಲಿದ್ದ ನಾರಿನ 15-20% ಭಾಗ ಇರುತ್ತದೆ. ಇದನ್ನೇ ಶ್ವೇತೋದಕ ಎನ್ನುವರು. ವಿಧಾನ ಮುಂದುವರಿದಂತೆ ಉಷ್ಣತೆಯನ್ನು ತಗ್ಗಿಸಲು ಹೊಸ ನೀರನ್ನು ಸೇರಿಸುತ್ತಿರಬೇಕು. ಆದ್ದುದರಿಂದ ಶ್ವೇತೋದಕದ ಸ್ವಲ್ಪ ಭಾಗವನ್ನು ತೆಗೆಯುವುದು ಅನಿವಾರ್ಯವಾಗುತ್ತದೆ. ಅದನ್ನು ವಿಸರ್ಜಿಸುವ ಮುನ್ನ ಅದರಲ್ಲಿರುವ ನಾರಿನ ಭಾಗವನ್ನು ಶೋಧಿಸಿ ಮಂದಕಾರಿಗಳಿಗೆ ಹಿಂತಿರುಗಿಸುವರು. ಅರೆಯಲು ಅಗತ್ಯವಾದ ಯಾಂತ್ರಿಕ ಶಕ್ತಿಯನ್ನು ಬಿಟ್ಟರೆ ಇನ್ನಾವ ಶಕ್ತಿ ಸಂಚಯನವೂ ಇಲ್ಲಿ ನಡೆಯುವುದಿಲ್ಲ. ಬಹುಕಾಲ ನೀರಿನ ಸಂಪರ್ಕದಲ್ಲಿ ಇರುವುದರಿಂದ ಸೆಲ್ಯುಲೋಸು ಕೊಂಚ ನೀರನ್ನು ಹೀರುತ್ತದೆ. ಇದೊಂದೇ ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆ. ಯಾಂತ್ರಿಕ ಪಲ್ಪಿನಿಂದಾದ ಕಾಗದ ಬಹುಕಾಲ ಬಾಳುವುದಿಲ್ಲ. ಹೀಗಾಗಲು ಅದರಲ್ಲಿರುವ ಸೆಲ್ಯುಲೋಸೇತರ ವಸ್ತುಗಳು ರಾಸಾಯನಿಕ ವಿಭಜನೆ ಹೊಂದುವುದು ಕಾರಣ. ವೃತ್ತಪತ್ರಿಕೆಗಳಿಗೆ ಬಳಸುವ ಕಾಗದ ಸುಲಭ ಬೆಲೆಗೆ ಸಿಗುವಂತಿರಬೇಕು. ಅದರ ತ್ರಾಣ ಮತ್ತು ಬಾಳಿಕೆ ಗೌಣ. ಆದ್ದರಿಂದ ಅಂಥ ಕಾಗದವನ್ನು ಮಾಡಲು ಯಾಂತ್ರಿಕ ಪಲ್ಪನ್ನು ಬಯಸುತ್ತಾರೆ. ಕೆಲವು ವೇಳೆ ಇದನ್ನು ಸ್ವಲ್ಪ ರಾಸಾಯನಿಕ ಪಲ್ಪಿನೊಡನೆ ಬೆರೆಸಿ ಅಗ್ಗದ ಬೆಲೆಯ ಪತ್ರಿಕಾ ಕಾಗದ, ಟಿಷ್ಯೂ ಕಾಗದ. ಗೋಡೆಗೆ ಹಚ್ಚುವ ಮತ್ತು ಹೊದಿಕೆಯ ಕಾಗದಗಳನ್ನು ಮಾಡುವರು.

 ಸಲ್ಫೇಟ್ ಪಲ್ಪ್: ಇದನ್ನು ಕ್ರಾಫ್ಟ್ ಪಲ್ಪೆಂದೂ ಕರೆಯುವರು. ಇಂದು ತುಂಬ ಬಳಕೆಯಲ್ಲಿರುವ ವಿಧಾನ. ಈ ಪಲ್ಪಿನ ತಯಾರಿಕೆಗೆ ಗಟ್ಟಿ ಮತ್ತು ಮೆದು ಮರಗಳೆರಡನ್ನೂ ಉಪಯೋಗಿಸಬಹುದು. ಇದೊಂದು ವಿಶಿಷ್ಟ ಅನುಕೂಲ. ಈ ವಿಧಾನ ರೂಪಿತವಾದದ್ದು ಮರಗಳಲ್ಲಿರುವ ಅಂಟು ಮತ್ತು ತೈಲ ವಸ್ತುಗಳನ್ನು ಪಡೆಯಲೆಂದು. ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಸ್ವರೂಪ ಸ್ಪಷ್ಟವಾಗಿಲ್ಲ. ಲಿಗ್ನಿನುಗಳು ಆಯಾ ಆಲ್ಕೊಹಾಲ್ ಮತ್ತು ಆಮ್ಲಗಳಿಗೆ ಜಲವಿಶ್ಲೇಷಣೆ ಹೊಂದುವುವೆಂದು ಭಾವಿಸಲಾಗಿದೆ. ಪ್ರಾಸಂಗಿಕವಾಗಿ ಮರ್‍ಕ್ಯಾಪ್ಟನುಗಳು ಮತ್ತು ಸಲ್ಫೈಡುಗಳು ಹುಟ್ಟುವುದರಿಂದ ಸಲ್ಫೇಟ್ ಕಾಗದ ಕಾರ್ಖಾನೆಗಳು ದುರ್ಗಂಧ ಬೀರುವುವು. ಒಂದು ಟನ್ ಸಲ್ಫೇಟ್ ಪಲ್ಪಿನ ಉತ್ಪಾದನೆಗೆ ಅಗತ್ಯವಾದ ವಿವರಗಳು ಕೆಳಗಿವೆ.

 ಮರ       ... 42 ಟನ್ನುಗಳು

 ಹೊಸ ಸುಣ್ಣ ... 325 ಪೌಂಡುಗಳು

 ಸಾಲ್ಟ್ ಕೇಕ್ ... 450 ಪೌಂಡುಗಳು

 ಹಬೆ       ... 10,000 ಪೌಂಡುಗಳು

 ವಿದ್ಯುಚ್ಛಕ್ತಿ ... 250 ಕಿಲೊವ್ಯಾಟ್ ಗಂಟೆಗಳು

 ಕೈದುಡಿಮೆ ... 5 ಆಳು, 1 ಗಂಟೆ ಕಾಲ

 ಸಲ್ಫೇಟ್ ಪಲ್ಪಿನ ತಯಾರಿಕೆಯ ವಿವಿಧ ಹಂತಗಳು ಹೀಗಿವೆ. ಮರದ ದಿಮ್ಮಿಗಳನ್ನು ಕತ್ತರಿಸಿ ತೊಗಟೆ ತೆಗೆದು ಚಕ್ಕೆಯಂತ್ರಕ್ಕೆ (ಚಿಪ್ಪರ್) ಒಡ್ಡಲಾಗುವುದು. ಇದರಲ್ಲಿ ಸುತ್ತುತ್ತಿರುವ ತಟ್ಟೆಗಳಿವೆ. ಒಂದೊಂದೂ ಉದ್ದವಾದ ಮತ್ತು ಭಾರವಾದ 3-4 ಕತ್ತಿಗಳಿಂದ ಸಜ್ಜಾಗಿದೆ. ಇವು ಮರವನ್ನು ಸಣ್ಣ ಚಕ್ಕೆಗಳನ್ನಾಗಿ ಮಾಡುವುವು. ಚಕ್ಕೆಗಳನ್ನು ತಿರುಗುವ ಅಥವಾ ಅಲ್ಲಾಡುವ ಜರಡಿಗಳ ಮೇಲಿಟ್ಟರೆ ಹೊಟ್ಟು ಮತ್ತು ಸಣ್ಣ ಚಕ್ಕೆಗಳು ಪ್ರತ್ಯೇಕಿಸಲ್ಪಡುತ್ತವೆ. ದೊಡ್ಡ ಚಕ್ಕೆಗಳನ್ನು ಅಪೇಕ್ಷಿತ ಗಾತ್ರಕ್ಕೆ ಪುನಃ ಚೂರು ಮಾಡಿ ಬೇಕಾದಾಗ ಪಾಚಕಕ್ಕೆ (ಡೈಜೆಸ್ಟರ್) ಗುರುತ್ವಾಕರ್ಷಣೆಯಿಂದ ರವಾನಿಸುವರು. ಇದನ್ನು ಉಕ್ಕಿನಿಂದ ಮಾಡಿರುತ್ತಾರೆ. ಅದರಲ್ಲಿ ಸೋಡಿಯಂ ಸಲ್ಫೈಡ್ ಮತ್ತು ಕಾಸ್ಟಿಕ್ ಸೋಡಾ ಮಿಶ್ರಣವಿದೆ. ಇದನ್ನು ಬೇಗುದಿ ದ್ರಾವಕ (ಕುಕ್ಕಿಂಗ್ ಲಿಕ್ಕರ್) ಎನ್ನುತ್ತಾರೆ. ಹಬೆ ಹಾಯಿಸಿದರೆ ಪಚನ ಕ್ರಿಯೆ ಪ್ರಾರಂಭವಾಗುವುದು. ಒತ್ತಡ ಚದರಂಗುಲಕ್ಕೆ 110ಪೌಂಡುಗಳಷ್ಟಿರುತ್ತದೆ. ಪಾಚಕಗಳು ಸ್ಥಾಯೀ ಅಥವಾ ಸುತ್ತುವ ಮಾದರಿಯವಾಗಿರಬಹುದು. ಬೇಯಿಸುವ ಅವಧಿ ಸುಮಾರು 3 ತಾಸುಗಳು. ಅನಂತರ ಒತ್ತಡವನ್ನು 80 ಪೌಂಡುಗಳಿಗೆ ತಗ್ಗಿಸಿ ಚಾರ್ಜನ್ನು ಮೊಹರಾದ ಕಡಾಯಗಳಿಗೆ ಬಿಡುವರು. ಇವು ಪ್ರತಿಪ್ರವಾಹ ತತ್ತ್ವದ ಪ್ರಕಾರ ಕೆಲಸ ಮಾಡುತ್ತವೆ. ಇಲ್ಲಿ ಶಾಖವಿನಿಮಯ ತೃಪ್ತಿಕರವಾಗಿ ಜರುಗಿ ಸಾಮಾನ್ಯವಾಗಿ ನಷ್ಟವಾಗುತ್ತಿದ್ದ ಹಬೆ ಉಳಿತಾಯವಾಗುವುದಲ್ಲದೆ ಮಾರ್ಜನವೂ ಚೆನ್ನಾಗಿರುವುದು. ನಿಸ್ಸಾರ (ಸ್ಪೆಂಟ್) ದ್ರಾವಕವನ್ನು ತೊಟ್ಟಿಗಳಲ್ಲಿ ಶೇಖರಿಸುತ್ತಾರೆ. ಅದರಿಂದ ಮುಂದೆ ರಾಸಾಯನಿಕ ವಸ್ತುಗಳನ್ನು ಉದ್ಧರಿಸುವ ತನಕ ಅದು ಅಲ್ಲೇ ಉಳಿಯುವುದು. ಇದಕ್ಕೆ ಕಪ್ಪು ದ್ರಾವಕ ಪಲ್ಪನ್ನು ಬೇರ್ಪಡಿಸಿ, ತೊಳೆದು, ಹೆಣಿಗೆ ಯಂತ್ರಕ್ಕೆ (ನಾಟ್ಟರ್) ಒಡ್ಡುವುದು ಮುಂದಿನ ಕ್ರಮ. ಬೇಯಿಸಿದಾಗ ಬಿಡಿಸಿಕೊಂಡಿರದ ನಾರಿನ ಗಂಟುಗಳನ್ನು ಇದು ತೆಗೆದು ಹಾಕುವುದು. ಅನಂತರ ಜರಡಿ ಹಿಡಿದರೆ ಬೇಯದ ಮರದ ಭಾಗ ಪ್ರತ್ಯೇಕವಾಗುವುದು. ಅಂತಿಮವಾಗಿ ಶೋಧಕಗಳು ಮತ್ತು ಮಂದಕಾರಿಗಳು ನೀರಿನ ಬಹುಪಾಲನ್ನು ನಿವಾರಿಸುವುವು. ಮಂದಕಾರಿಗಳಲ್ಲಿ ಕೊಳವೆಯಾಕಾರದ ಚೌಕಟ್ಟಿಗೆ ತಂತಿಯ ಜಾಲರಿಯಿದೆ. ಇವು ತೆಳುಗೊಳಿಸಿದ ಪಲ್ಪಿನಲ್ಲಿ ಚಲಿಸಿದಾಗ ಜಾಲರಿಗೆ ಪಲ್ಪು ಸುತ್ತಿಕೊಳ್ಳುವುದು. ಎಲ್ಲ ನೀರೂ ಸೋರಿಹೋಗುವುದು.

 ಮಂದಗೊಳಿಸಿದ ಪಲ್ಪನ್ನು ಆಮೇಲೆ ಚಲುವೆ ಮಾಡಬೇಕು. ಎರಡು ವಿಧವಾದ ಚಲುವೆಯ ಕ್ರಮಗಳು ರೂಢಿಯಲ್ಲಿವೆ. ಒಂದೇ ಹಂತದಲ್ಲಿ ಕ್ಯಾಲ್ಸಿಯಂ ಹೈಪೋಕ್ಲೋರೈಟಿನಿಂದ ಚಲುವೆ ಮಾಡುವುದು. ಇದರಿಂದ ಕೆನೆಬಣ್ಣದ ಕಾಗದವಾಗುತ್ತದೆ. ಮತ್ತೊಂದು ಮೂರು ಹಂತಗಳ ವಿಧಾನ. ಕ್ಲೋರಿನ್ನಿನ ಪ್ರಯೋಗ, ಸುಣ್ಣದ ಹಾಲು ಅಥವಾ ಕಾಸ್ಟಿಕ್ ಸೋಡಾದಿಂದ ತಟಸ್ಥೀಕರಣ ಮತ್ತು ಕ್ಯಾಲ್ಸಿಯಂ ಹೈಪೊಕ್ಲೋರಿಟಿನಿಂದ ವರ್ತನೆ. ಮರದ್ರವ್ಯದಲ್ಲಿದ್ದ ಟ್ಯಾನಿನುಗಳು ಬಣ್ಣಕಾರಕ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಇವನ್ನು ಉತ್ಕರ್ಷಿಸಿ ನಾಶಪಡಿಸುವುದು ಚಲುವೆ ಮಾಡುವ ಉದ್ದೇಶ. ಚಲುವೆಯಾದ ಅನಂತರ ಪಲ್ಪನ್ನು ತೊಳೆದು ಪುನಃ ಮಂದಗೊಳಿಸಬೇಕು. ಆಗ ಮತ್ತಷ್ಟು ಶುಷ್ಕವಾಗಿ ಹಾಳೆಗಳನ್ನು ಕಂತೆಗಳಾಗಿ ಮಡಿಸಲು ಅನುಕೂಲ. ಈ ಕಂತೆಗಳಿಗೆ ಲ್ಯಾಪ್ ಎಂದು ಹೆಸರು. ಇದಕ್ಕಾಗಿ ಬಳಸುವ ಮಂದಕಾರಿಗಳಲ್ಲಿ ಒಂದು ಕೊಳವೆ ದಾಸ್ತಾನು ದ್ರಾವಣವಿರುವ ಹಂಡೆಯಲ್ಲಿ ತಿರುಗುತ್ತಿರುತ್ತದೆ. ಇದಕ್ಕೊಂದು ಅನಂತವಾದ ಫೆಲ್ಟಿನ ಪಟ್ಟಿ ಇದೆ. ಇದಕ್ಕೆ ಅಂಟಿಕೊಂಡ ಪಲ್ಪಿನ ಹಾಳೆಗಳು ಅನುಕ್ರಮವಾಗಿ ಹಿಂಡುವ ಮತ್ತು ಒತ್ತುವ ರೋಲರುಗಳ ಮೂಲಕ ಹಾದುಹೋದಾಗ ಪಲ್ಪಿನ ನಾರುಗಳಲ್ಲಿ 55-65% ತೇವಾಂಶವಿರುವುದು. ಹೈಡ್ರಾಲಿಕ್ ಪ್ರೆಸ್ಸುಗಳಲ್ಲಿ ಚದರಂಗುಲಕ್ಕೆ 3,000 ಪೌಂಡುಗಳಷ್ಟು ಒತ್ತಡ ಬಿದ್ದಾಗ ತೇವಾಂಶ 40-50% ಆಗುವುದು.

 ಕೋನಿಫರಸ್ ಮರಗಳಿಂದಾದ ಪಲ್ಪಿನಲ್ಲಿರುವ ನಾರುಗಳು ಅತ್ಯಂತ ಉದ್ದವಾಗಿರುವುವು. ಅಲ್ಲದೆ ಈ ಪಲ್ಪಿನ ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳೂ ಅಷ್ಟು ತೀಕ್ಷ್ಣ ಸ್ವಭಾವದ ಪದಾರ್ಥಗಳಲ್ಲ. ಹೀಗಾಗಿ ಇತರ ಎರಡು ರಾಸಾಯನಿಕ ವಿಧಾನಗಳಿಂದ ತಯಾರಿಸಿದ ಕಾಗದಕ್ಕಿಂತ ಇಲ್ಲಿ ಹೆಚ್ಚು ತ್ರಾಣವಿರುವ ಕಾಗದ ದೊರೆಯುತ್ತದೆ. ಹಿಂದೆ ಕ್ರಾಫ್ಟ್ ಕಾಗದದ ಕಪ್ಪು ಛಾಯೆಯಿಂದಾಗಿ ಅದರ ಉಪಯೋಗ ಹೊದಿಕೆಗಳು, ಚೀಲಗಳು ಮತ್ತು ರಟ್ಟುಗಳ ತಯಾರಿಕೆಗೆ ಸೀಮಿತವಾಗಿತ್ತು. ನವೀನ ಚಲುವೆ ವಿಧಾನಗಳ ಅನ್ವಯದಿಂದ ತೆಳುಬಣ್ಣದ ಮತ್ತು ಶುಭ್ರವಾದ ಪಲ್ಪಿನ ಉತ್ಪಾದನೆ ಸಾಧ್ಯವಾಗಿದೆ. ಅಲ್ಲದೇ ಈ ಸುದೃಢವಾದ ಪಲ್ಪನ್ನು ಇತರ ಪಲ್ಪುಗಳೊಂದಿಗೆ ಬೆರೆಸಿ ಕಾಗದದ ತ್ರಾಣವನ್ನು ಹೆಚ್ಚಿಸಬಹುದಾಗಿದೆ.

 ಕಪ್ಪು ದ್ರಾವಕದ ಗಳಿಕೆ: ಇದನ್ನು ಸಂಪಾದಿಸದಿದ್ದರೆ ಸಲ್ಫೇಟ್ ವಿಧಾನದ ಆರ್ಥಿಕ ಸಮತೋಲನ ಹದಗೆಡುತ್ತದೆ. ಪಾಚಕಕ್ಕೆ ನಾವು ಒದಗಿಸುವ ಕ್ಷಾರದ 95-98% ಭಾಗ ಕಪ್ಪು ದ್ರಾವಣದಲ್ಲಿರುವುದು ಗಮನಾರ್ಹ. ಅದು ಸೋಡಿಯಂ ಕಾರ್ಬೊನೇಟ್ ಅಥವಾ ಆಗ್ರ್ಯಾನಿಕ್ ಸೋಡಿಯಂ ಲವಣಗಳ ರೂಪದಲ್ಲಿದೆ. ಸೋಡಿಯಂ ಸಲ್ಫೈಡಿನೊಂದಿಗೆ ಸಂಯೋಜಿತ ಸ್ಥಿತಿಯಲ್ಲಿ ಗಣನೀಯ ಪ್ರಮಾಣದ ಗಂಧಕಯುಕ್ತ ಆಗ್ರ್ಯಾನಿಕ್ ವಸ್ತುಗಳು ಇರುವುವು. ಜೊತೆಗೆ ಸ್ವಲ್ಪ ಸೋಡಿಯಂ ಸಲ್ಫೇಟ್, ಉಪ್ಪು, ಸಿಲಿಕ ಮತ್ತು ಲೇಶಮಾತ್ರ ಸುಣ್ಣ, ಕಬ್ಬಿಣದ ಆಕ್ಸೈಡ್, ಅಲ್ಯೂಮಿನಾ ಮತ್ತು ಪೊಟ್ಯಾಷುಗಳಿವೆ. ಒಟ್ಟು ಘನವಸ್ತುಗಳ ಪ್ರಮಾಣ ಸರಾಸರಿ 20% ಆಗುವುದು. ಮಲ್ಟಿಪಲ್ ಪರಿಣಾಮದ ಅಥವಾ ಕ್ಯಾಸ್ಕೇಡ್ ಬಾಷ್ಪಕಾರಕಗಳಲ್ಲಿ ಸಾಂದ್ರೀಕರಿಸಿದರೆ 45-70% ಘನವಸ್ತುಗಳಿರುವ ದ್ರಾವಕ ಉಳಿಯುತ್ತದೆ. ಜಲಾಂಶವನ್ನು ಈ ಮಟ್ಟಕ್ಕೆ ತಗ್ಗಿಸದಿದ್ದರೆ, ಮುಂದೆ ಕುಲುಮೆಗೆ ಎರಚಿದಾಗ ಅದು ಹೊತ್ತಿ ಉರಿಯುವುದಿಲ್ಲ. ಆಧುನಿಕ ಗಳಿಕೆಯ ವಿಧಾನದಲ್ಲಿ ಸಾಂದ್ರೀಕರಿಸಿದ ಬಿಸಿಯಾದ ದ್ರಾವಕಕ್ಕೆ ಸೋಡಿಯಂ ಸಲ್ಫೇಟ್ ಸೇರಿಸಿ ತಟ್ಟೆ ಬಾಷ್ಪಕಾರಕಕ್ಕೆ (ಡಿಸ್ಕ್ ಎವಾಪೊರೇಟರ್) ಒದಗಿಸುವರು. ದ್ರಾವಕ ಇಳಿಯುವ ದಿಕ್ಕಿಗೆ ವಿರುದ್ಧವಾಗಿ ಅನಿಲ ಪ್ರವಾಹವಿರುವುದು. ದ್ರಾವಕ ಕೆಳಗೆ ಇಳಿದಂತೆಲ್ಲ ನೀರು ಆವಿಯಾಗಿ ಆಗ್ರ್ಯಾನಿಕ್ ಲವಣಗಳು ವಿಭಜಿಸುವುವು. ಇಂಗಾಲ ಉರಿದು ಹೋಗುವುದು. ಇನಾಗ್ರ್ಯಾನಿಕ್ ಲವಣಗಳು ವಿಭಜಿಸುವುವು. ಇಂಗಾಲ ಉರಿದು ಹೋಗುವುದು. ಇನಾಗ್ರ್ಯಾನಿಕ್ ವಸ್ತುಗಳು ದ್ರವಿಸುವುವು. ಕೆಳಕಂಡ ಕ್ರಿಯೆ ನಡೆಯುವುದು.

ಓಚಿ2Sಔ4 + 2ಅ  ಓಚಿ2S + 2ಅಔ2

ದ್ರವೀಕರಿಸಿದ ವಸ್ತು ಜ್ವಲನ ಕ್ರಿಯಾಘಟಕದಿಂದ (ಕಾಸ್ಟಿಸೈಸಿಂಗ್ ಪ್ಲಾಂಟ್) ಬರುತ್ತಿರುವ ಲೀನಕಾರಿ ದ್ರಾವಕದ (ಡಿಸಾಲ್ವಿಂಗ್ ಲಿಕ್ಕರ್) ದುರ್ಬಲ ದ್ರಾವಣಕ್ಕೆ ಬೀಳುವಂತೆ ಏರ್ಪಡಿಸಿರುತ್ತಾರೆ. ಆಗ ಹಸುರು ದ್ರಾವಕ ಉಂಟಾಗುವುದು. ಅದ್ರಾವ್ಯ ವಸ್ತುಗಳನ್ನು ಒತ್ತರಿಸಲು ಬಿಟ್ಟು ಉಳಿದ ದ್ರಾವಕಕ್ಕೆ ಅರಳಿದ ಸುಣ್ಣವನ್ನು ಸೇರಿಸಲಾಗುವುದು. ಮುಂದೆ ಒದಗುವ ಕ್ಯಾಲ್ಸಿಯಂ ಕಾರ್ಬೊನೇಟಿನಿಂದ ಇದನ್ನು ಮಾಡಿಕೊಳ್ಳಬಹುದು. ಈ ಸನ್ನಿವೇಶದಲ್ಲಿ ಕೆಳಕಂಡ ಉಷ್ಣಗ್ರಾಹಕ ಕ್ರಿಯೆ ಕ್ಷಿಪ್ರವಾಗಿ ನಡೆಯುತ್ತದೆ.

                                              ಓಚಿ2ಅಔ3 + ಅಚಿ(ಔಊ)2  2ಓಚಿಔಊ + ಅಚಿಅಔ3

            (ಚಿq)   (s)         (ಚಿq)   ುಊ =-2100 ಕೆಲೊರಿಗಳು

ಫಲಿತ ಬಗ್ಗಡವನ್ನು ಸೋಸಲು ಮಾನೆಲ್ ಮಿಶ್ರಲೋಹದಿಂದ ತಯಾರಿಸಿದ ಜರಡಿಗಳಿರುವ ನಿರಂತರ ಆವರ್ತ ಸೋಸಣಿಗೆಗಳು (ಕಂಟಿನ್ಯುವಸ್ ರೋಟರಿ ಫಿಲ್ಟರ್ಸ್) ಬಳಕೆಯಲ್ಲಿವೆ. ಕ್ಯಾಲ್ಸಿಯಂ ಕಾರ್ಬೊನೇಟಿನ ಮಡ್ಡಿಯನ್ನು ಸುಣ್ಣದ ಗೂಡಿಗೆ ರವಾನಿಸಿ ಕ್ಯಾಲ್ಸಿಯಂ ಆಕ್ಸೈಡ್ ತಯಾರಿಸಿಕೊಳ್ಳುವರು. ಸೋಸಣಿಗೆಗಳಿಂದ ನಿರ್ಗಮಿಸುವ ದ್ರವವೇ ಶ್ವೇತೋದಕ. ನಾರುಗಳನ್ನು ಬೇಯಿಸಲು ಇದನ್ನು ವಿನಿಯೋಗಿಸುವರೆಂದು ಹಿಂದೆಯೇ ಹೇಳಿದೆ. ಇದರಲ್ಲಿ ಕಾಸ್ಟಿಕ್ ಸೋಡಾ, ಸೋಡಿಯಂ ಸಲ್ಫೈಡ್ ಮತ್ತು ಕೊಂಚ ಸೋಡಿಯಂ ಕಾರ್ಬೊನೇಟ್, ಸಲ್ಫೇಟ್ ಮತ್ತು ಥಯೊಸಲ್ಫೇಟುಗಳಿವೆ.

 ಕಪ್ಪುದ್ರಾವಕದ ಗಳಿಕೆಯ ಕಾಲದಲ್ಲಿ ನೀಳತೈಲವೆಂಬ (ಟಾಲ್ ಆಯಿಲ್) ಉಪವಸ್ತು ದೊರೆಯುವುದು. ಇದು ಸ್ನಿಗ್ಧವಾದ ಕಪ್ಪು ಬಣ್ಣದ ಅಂಟುದ್ರವ. ಇದರಲ್ಲಿ ರೆಸಿನ್ ಆಮ್ಲಗಳು ಮತ್ತು ಮಿಥೆನಾಲ್ ಇವೆ. ನೀಳತೈಲದ ಬೇರ್ಪಡೆಗೆ ಕೇಂದ್ರಾಪಗಮನ ಯಂತ್ರ ಬೇಕು. ಸಾಬೂನುಗಳು, ಚರಬಿಗಳು (ಗ್ರೀಸಸ್) ಮತ್ತು ಎಮಲ್ಷನುಗಳ ತಯಾರಿಕೆಗೆ ನೀಳತೈಲ ಉಪಯೋಗವಾಗುತ್ತಿದೆ. ಕಪ್ಪು ದ್ರಾವಕವನ್ನು ಬೇರಿಯಂ ಹೈಡ್ರೇಟಿನೊಡನೆ ಹಿಂಗಿಸಿದರೆ ಘನವಸ್ತುವಾಗುತ್ತದೆ. ಇದನ್ನು ಪುಡಿ ಮಾಡಿ ವಿನಾಶಕ ಬಾಷ್ಪೀಭವನಕ್ಕೆ ಗುರಿಪಡಿಸಿದರೆ ಮೆಥೆನಾಲ್ ದೊರೆಯುವುದು. ಈ ಕ್ರಮ ದುಬಾರಿಯಾಗುವುದರಿಂದ ಅನುಷ್ಠಾನಯೋಗ್ಯವಲ್ಲ. ಪಾಚಕದಿಂದ ಹೊರಬಿದ್ದ ಅನಿಲಗಳಲ್ಲಿ ಸಾಕಷ್ಟು ಸ್ಪ್ರೂಸ್ ಟರ್ಪೆಂಟೈನ್ ಇರುತ್ತದೆ. ಒಂದು ಟನ್ ಪಲ್ಪಿನಿಂದ 2-10 ಗ್ಯಾಲನ್ ಟರ್ಪೆಂಟೈನ್ ಎಣ್ಣೆ ಸಿಗಬಹುದು. ಇದನ್ನು ಶುದ್ಧಿ ಮಾಡಿದರೆ ಸಲ್ಫೇಟ್ ಟೆರ್ಪೆಂಟೈನ್ ಆಗುತ್ತದೆ.

 ಸೋಡಾ ಪಲ್ಪ್: ಇದರ ತಯಾರಿಕೆ ಸಲ್ಫೇಟ್ ಪಲ್ಪಿನಂತೆಯೇ. ಎರಡೂ ಕ್ಷಾರೀಯ ವಿಧಾನಗಳು. ಇದಕ್ಕೆ ಡೆಸಿಡುಯಸ್ ಮಾದರಿಯ ಅಥವಾ ಅಗಲವಾದ ಎಲೆಗಳುಳ್ಳ ಮರಗಳಾಗಬೇಕು. ಆದ್ದರಿಂದ ಸೋಡಾಪಲ್ಪಿನ ತಯಾರಿಕೆಗೆ ಪಾಪ್ಲರ್ ಮರಗಳಿಗೆ ಪ್ರಾಶಸ್ತ್ಯ ಹೆಚ್ಚು. ಅವನ್ನು ಬೇಯಿಸುವುದು ಸುಲಭ. ಬರ್ಚ್, ಮೇಪಲ್, ಚೆಸ್ಟ್‍ನಟ್ ಇತ್ಯಾದಿ ಮರಗಳನ್ನು ಉಪಯೋಗಿಸುವ ಪರಿಪಾಠವಿದೆ. ಅಗಲವಾದ ಎಲೆಗಳಿರುವ ಮರಗಳು ನೀರಿನಲ್ಲಿ ಮುಳುಗುವುದರಿಂದ ಅವನ್ನು ರೈಲಿನಲ್ಲಿ ಅಥವಾ ಹಡಗುಗಳಲ್ಲಿ ಕಾರ್ಖಾನೆಗೆ ಸಾಗಿಸಬೇಕಾಗುತ್ತದೆ. ಬೇಯಿಸುವ ಮುನ್ನ ಮರವನ್ನು ಸಲ್ಫೇಟ್ ವಿಧಾನದಂತೆಯೇ ಸಿದ್ಧಗೊಳಿಸುತ್ತಾರೆ. ಬೇಯಿಸುವ ದ್ರಾವಕದಲ್ಲಿ 6-7% ಕಾಸ್ಟಿಕ್ ಸೋಡಾ ಇರುತ್ತದೆ. ಪಾಚಕಗಳ ರಚನೆಯೂ ಅಲ್ಲಿಯಂತೆಯೇ ಇದ್ದು ಚದರಂಗುಲಕ್ಕೆ 110 ಪೌಂಡುಗಳಷ್ಟು ಒತ್ತಡ ಮತ್ತು 1730 ಸೆ. ಉಷ್ಣತೆಯಲ್ಲಿ 2-3 ತಾಸುಗಳ ಕಾಲ ಬೇಯಿಸಲಾಗುವುದು. ಲಭ್ಯವಾದ ಪಲ್ಪನ್ನು ತೆರೆದ ತೊಟ್ಟಿಯಲ್ಲಿ ತೊಳೆಯುವರು. ತೊಟ್ಟಿಗೆ ಸರಂಧ್ರವಾದ ಉಕ್ಕಿನ ಹುಸಿತಳವಿದೆ. ರಂಧ್ರಗಳು ಅರ್ಧ ಅಂಗುಲದ ಅಂತರದಲ್ಲಿವೆ. ತಳದಲ್ಲಿ ನವುರಾದ ತಂತಿಯ ಬಲೆ ಇದೆ. ಉಳಿದ ವಿವರಗಳು ಸಲ್ಫೇಟ್ ಪಲ್ಪಿನಂತೆ.

 ಈ ವಿಧಾನದಲ್ಲಿ ದೊರೆಯುವ ಕಪ್ಪು ದ್ರಾವಕದಲ್ಲಿ 16% ಘನವಸ್ತು ಮತ್ತು 4-5% ಕ್ಷಾರವಿದೆ. ಕ್ಷಾರದ ಬಹುಭಾಗ ಸೋಡಿಯಂ ಕಾರ್ಬೋನೇಟಾಗಿಯೂ ಉಳಿದದ್ದು ಸೋಡಿಯಂ ಹೈಡ್ರಾಕ್ಸೈಡಿನ ರೂಪದಲ್ಲಿಯೂ ಇರುವುದು. ಸಲ್ಫೇಟ್ ವಿಧಾನದಂತೆಯೇ ಸಾಂದ್ರೀಕರಿಸಿದರೂ ದ್ರವೀಕರಣ ಕುಲುಮೆಯ ಅಗತ್ಯವಿಲ್ಲಿಲ್ಲ, ಲಭ್ಯವಸ್ತುವೇ ಕರಿಯ ಬೂದಿ. ಇದರಲ್ಲಿ 20-25% ಇಂಗಾಲವಿರುವುದು. ಹುಸಿತಳಗಳಿರುವ ತೊಟ್ಟಿಗಳಲ್ಲಿ ಪ್ರತಿಪ್ರವಾಹ ತತ್ತ್ವದ ಪ್ರಕಾರ ನೀರು ಅಥವಾ ದುರ್ಬಲ ಕ್ಷಾರದಿಂದ ಈ ಬೂದಿಯನ್ನು ಅವಶೋಷಿಲಾಗುವುದು. ದೊರೆತ ದ್ರಾವಣವನ್ನು ಮತ್ತೊಂದು ತೊಟ್ಟಿಗೆ ಹರಿಸಿ ಇಂಗಾಲದ ಕಸವನ್ನು ಬಿಸುಡುವರು. ಈಗ ಸುಣ್ಣವನ್ನು ಸೇರಿಸಿದರೆ ಮಡ್ಡಿಯಾಗುವುದು. ಇದನ್ನು ಜ್ವಲನಕೋಶಕ್ಕೆ ಒಯ್ದು ಸೋಡಿಯಂ ಕಾರ್ಬೊನೇಟನ್ನು ಪೂರೈಸುವುದು. ಆಗ ಪರಸ್ಪರ ಪಲ್ಲಟನೆಯಾಗಿ ಕ್ಯಾಲ್ಸಿಯಂ ಕಾರ್ಬೊನೇಟು ಒತ್ತರಿಸುತ್ತದೆ. ಇದನ್ನು ಶೋಧಿಸಿ ಸುಣ್ಣದ ಗೂಡಿಗೆ ರವಾನಿಸುವರು.

ಓಚಿ2ಅಔ3 + ಅಚಿ(ಔಊ)2  2ಓಚಿಔಊ + ಅಚಿಅಔ3

ಶೋಧಿತ ದ್ರವವೇ ಬಿಳಿಯ ದ್ರಾವಕ. ಇದು ಮಾಮೂಲಿನಂತೆ ವಿನಿಯೋಗವಾಗುವುದು.

ಅಗಲವಾದ ಎಲೆಗಳಿರುವ ಮರದ ನಾರುಗಳು 1.5 ಮಿಲಿಮೀಟರುಗಳಷ್ಟಿದ್ದರೆ, ಕೊನಿಫರಸ್ ಮರದ ನಾರುಗಳು ಇದರ ಎರಡರಷ್ಟು ಉದ್ದವಿರುವುವು. ಆದ್ದರಿಂದ ಸೋಡಾ ಪಲ್ಪಿನಿಂದಾದ ಕಾಗದದ ತ್ರಾಣ ಕಡಿಮೆ. ಇದಕ್ಕೋಸ್ಕರವೇ ಈ ಪಲ್ಪನ್ನು ಇತರ ಪಲ್ಪುಗಳೊಡನೆ ಬೆರೆಸಿ ಉಪಯೋಗಿಸುವುದು. ಪುಸ್ತಕ ಮತ್ತು ನಿಯತಕಾಲಿಕಗಳ ಮುದ್ರಣಕ್ಕೆ ಬೇಕಾದ ಕಾಗದ ಮತ್ತು ಟಿಷ್ಯೂಕಾಗದದ ತಯಾರಿಕೆಗೆ ಇದು ವಿಶೇಷವಾಗಿ ಬಳಸಲ್ಪಡುತ್ತದೆ. ಒಂದು ಟನ್ ಸೋಡಾ ಪಲ್ಪಿನ ಉತ್ಪಾದನೆಯಲ್ಲಿ ಆಗುವ ವಸ್ತು ಮತ್ತು ಶಕ್ತಿಸಂಚಯನದ ವಿವರ ಹೀಗಿದೆ:

ಮರ       ... 1.5-2 ಟನ್ನುಗಳು

ಹೊಸ ಸುಣ್ಣ ... 500 ಪೌಂಡುಗಳು

ಸೋಡಾಬೂದಿ ... 250 ಪೌಂಡುಗಳು

 ಹಬೆ       ... 13,000 ಪೌಂಡುಗಳು

 ವಿದ್ಯುಚ್ಛಕ್ತಿ ... 250 ಕಿಲೊವಾಟ್ ಗಂಟಿಗಳು

 ನೇರದುಡಿಮೆ ... 5 ಆಳುಗಳು, 1 ಗಂಟೆ ಕಾಲ 

ಸಲ್ಫೈಟ್ ಪಲ್ಪ್: ಉತ್ಪಾದನಾ ಪ್ರಮಾಣದಲ್ಲಿ ಸಲ್ಫೇಟ್ ವಿಧಾನವನ್ನು ಬಿಟ್ಟರೆ ಇದೇ ಪ್ರಮುಖವಾದುದು. ಇಲ್ಲಿ ಸಾಮಾನ್ಯವಾಗಿ ಉಪಯೋಗಿಸುವುದು ಸ್ಟ್ರೂಸ್ ಮರ. ಆದರೆ ಹೆಮ್‍ಲಾಕ್ ಮತ್ತು ಬಾಲ್ಸಂಗಳನ್ನು ಸಹ ಉಪಯೋಗಿಸುವುದುಂಟು. ಮರದ ತೊಗಟೆ ಬಿಡಿಸಿ ಶುದ್ಧ ಮಾಡಿ ಸಲ್ಫೇಟ್ ವಿಧಾನದಂತೆ ಅರ್ಧ ಅಂಗುಲದ ಚಕ್ಕೆಗಳಾಗಿ ಮಾಡುವರು. ಬೇಯಿಸುವುದಕ್ಕೆ ಮುಂಚೆ ಪಾಚಕಗಳ ಮೇಲ್ಭಾಗದಲ್ಲಿರುವ ವಿಶೇಷ ಡಬ್ಬಗಳಲ್ಲಿ ಈ ಚಕ್ಕೆಗಳನ್ನು ಕೂಡಿಟ್ಟಿರುತ್ತಾರೆ. ಅನಂತರ ಕ್ಯಾಲ್ಸಿಯಂ ಬೈಸಲ್ಫೈಟ್ ಮತ್ತು ಗಂಧಕದ ಡೈ ಆಕ್ಸೈಡುಗಳಿರುವ ದ್ರಾವಣದಲ್ಲಿ ಬೇಯಿಸಲಾಗುವುದು. ಪ್ರಾಯಶಃ ಕೆಳಕಂಡ ಕ್ರಿಯೆಗಳು ಏಕಕಾಲದಲ್ಲಿ ನಡೆಯುವುವು. ಲಿಗ್ನಿನ್ನಿನೊಡನೆ ಬೈಸಲ್ಫೈಟಿನ ವರ್ತನೆ ಮತ್ತು ಸೆಲ್ಯುಲೋಸ್-ಲಿಗ್ನಿನ್ ಸಂಕೀರ್ಣದ ಜಲವಿಶ್ಲೇಷಣೆ. ಮರದಲ್ಲಿದ್ದ ಹೆಮಿಸೆಲ್ಯುಲೋಸುಗಳು ಸರಳ ಸಂಯುಕ್ತಗಳಾವುವು. ಬಳಸಿದ ಕಚ್ಚಾವಸ್ತುವಿನ ಅರ್ಧಕ್ಕೂ ಮೀರಿದಷ್ಟು ಭಾಗ ಸಾವಯವ ಘನವಸ್ತುಗಳು ವಿಲೀನ ಸ್ಥಿತಿಯಲ್ಲಿ ಶೇಷ ದ್ರಾವಕದಲ್ಲಿರುವುವು. ಇದರ ವಿನಿಯೋಗ ಒಂದು ಸಮಸ್ಯೆ. ಸುಣ್ಣದ ಬದಲು ಮ್ಯಾಗ್ನೀಸಿಯಾ, ಕ್ಯಾಲ್ಸಿಯಂ ಬದಲು ಸೋಡಿಯಂ ಮತ್ತು ಅಮೋನಿಯಾ ಬಳಸುವ ಯತ್ನ ನಡೆದಿದೆ. ಆದರೆ ಶೇಷ ರಾಸಾಯನಿಕ ಗಳಿಕೆ ದುಬಾರಿಯಾಗುವುದರಿಂದ ಇವುಗಳ ಬಳಕೆ ಸೀಮಿತಗೊಂಡಿದೆ.

ಕ್ಯಾಲ್ಸಿಯಂ ಆಧರಿತ ಸಲ್ಫೈಟ್ ಪಲ್ಪಿಂಗ್ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಬೇಗುದಿ ದ್ರಾವಕದ ತಯಾರಿಕೆ ಗೋಪುರ ಮತ್ತು ಸುಣ್ಣದ ಹಾಲಿನ ವಿಧಾನಗಳೂ ಬೇಯಿಸುವುದಕ್ಕೆ ನೇರ ಮತ್ತು ಪರೋಕ್ಷ ವಿಧಾನಗಳೂ ಅನುಷ್ಠಾನದಲ್ಲಿವೆ. ಗೋಪುರ ವ್ಯವಸ್ಥೆಯ ನೇರ ಬೇಯಿಸುವ ವಿಧಾನವನ್ನು ಮುಂದೆ ವಿವೇಚಿಸಲಾಗಿದೆ. ಬೇಗುದಿ ದ್ರಾವಕದ ತಯಾರಿಕೆಯಲ್ಲಿ ಆಗುವ ಮೂಲಕ್ರಿಯೆಗಳು ಬಹು ಸರಳ.

S + ಔ2 Sಔ2

2 Sಔ2 + ಊ2ಔ + ಅಚಿಅಔ3 ಅಚಿ(ಊSಔ3)2+ ಅಔ2

2 Sಔ2 + ಊ2ಔ + ಒgಅಔ3   ಒg(ಊSಔ3)2+ ಅಔ2

ಆವರ್ತ ಜ್ವಾಲಕದಿಂದ (ರೋಟರಿ ಬರ್ನರ್) ಕಾಸಿದ ತೊಟ್ಟಿಯಲ್ಲಿ ಗಂಧಕವನ್ನು ಕರಗಿಸಲಾಗುವುದು. ದ್ರವಿತ ಗಂಧಕವನ್ನು ಜ್ವಾಲಕಕ್ಕೆ ಒದಗಿಸಿದರೆ ಗಂಧಕ ಉತ್ಕರ್ಷಿತವಾಗುವುದು. ಆವಿಯಾಗಿ ಹೋದ ಗಂಧಕ ದಹನ ಕೋಶವೊಂದನ್ನು ಪ್ರವೇಶಿಸಿ ಅಲ್ಲಿ ತಾನೂ ಗಂಧಕ ಡೈ ಆಕ್ಸೈಡ್ ಆಗುವ ಸಂಭವವಿದೆ. ಉತ್ಪತ್ತಿಯಾದ ಗಂಧಕದ ಡೈ ಆಕ್ಸೈಡು ಆಗುತ್ತದೆ. ಈ ಹಂತದಲ್ಲಿ ಗಾಳಿನಿಯಂತ್ರಣ ಮುಖ್ಯ. ಇಲ್ಲದಿದ್ದರೆ ಗಂಧಕದ ಟ್ರೈ ಆಕ್ಸೈಡು ನೀರಿನಿಂದ ಆವೃತವಾದ ಕೊಳಾಯಿಗಳ ಮೂಲಕ ಹಾದುಹೋಗುವಾಗ ತಣಿಯುವುದು. ಅನಿಲವನ್ನು ನೀರಿನಲ್ಲಿ ಲೀನಗೊಳಿಸುವುದು ಮುಂದಿನ ಕ್ರಮ. ಇದಕ್ಕಾಗಿ ಎರಡು ಮೂರು ಗೋಪುರಗಳಲ್ಲಿ ಸುಣ್ಣಕಲ್ಲನ್ನು ತುಂಬಿರುತ್ತಾರೆ. ಕೆಳಗಿನ ಹಾಯುವ ಗಂಧಕದ ಡೈ ಆಕ್ಸೈಡು ಮೇಲಿನಿಂದ ಸಿಂಪಡಿಸಲ್ಪಡುತ್ತಿರುವ ನೀರಿನಲ್ಲಿ ಲೀನವಾಗುವುದು. ಅಂತಿಮವಾಗಿ ಪಾಚಕಗಳನ್ನು ತಲಪುವ ದ್ರಾವಣದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಬೈಸಲ್ಫೈಟುಗಳ ರೂಪದಲ್ಲಿ 4. 5% ಸಂಯೋಜಿತ ಗಂಧಕದ ಡೈ ಆಕ್ಸೈಡೂ 3.5% ಸ್ವತಂತ್ರ ಗಂಧಕದ ಡೈ ಆಕ್ಸೈಡೂ ಇರುತ್ತವೆ. ಪಾಚಕಕ್ಕೆ ಮರದ ಚಕ್ಕೆಗಳನ್ನು ತುಂಬಿ ಆಮ್ಲೀಯ ಬೇಗುದಿ ದ್ರಾವಕವನ್ನು ಕೆಳಗಿನಿಂದ ಪಂಪ್ ಮಾಡಲಾಗುವುದು. ಪಾಚಕಗಳು ಕೊಳವೆಯಾಕಾರದ ಉಕ್ಕಿನ ಪಾತ್ರೆಗಳು. ಅವುಗಳಲ್ಲಿ 1-23 ಟನ್ ನಾರೂ 3,000-5,1000 ಗ್ಯಾಲನ್ ದ್ರಾವಕವೂ ಹಿಡಿಸುತ್ತವೆ. ಪಾಚಕದ ಅಸ್ತûರಿಯನ್ನು ಸಿಮೆಂಟ್ ಬೆಣಚುಕಲ್ಲಿನ ಪುಡಿ ಮತ್ತು ಆಮ್ಲ ನಿರೋಧಕ ಇಟ್ಟಗೆಗಳ ಹುಡಿ ಮಿಶ್ರಣದಿಂದ ಮಾಡಿರುತ್ತಾರೆ. ಇಲ್ಲದಿದ್ದರೆ ಬೇಗುದಿ ದ್ರಾವಕ ಒಳಭಾಗವನ್ನು ತಿಂದು ಹಾಕುವುದು.

ಪಾಚಕಕ್ಕೇ ನೇರವಾಗಿ ಹಬೆಯನ್ನು ನುಗ್ಗಿಸಿ ಕಾಸುವ ಪದ್ದತಿಯಿತ್ತು. ಇದರಿಂದ ದ್ರಾವಕ ದುರ್ಬಲವಾಗುತ್ತಿದ್ದುದರಿಂದ ಈಗ ಕೈ ಬಿಡಲಾಗಿದೆ. ಸ್ಟೇನ್‍ಲೆಸ್ ಉಕ್ಕಿನ ಕೊಳಾಯಿಗಳಲ್ಲಿ ದ್ರಾವಕವನ್ನಿಟ್ಟು ಹೊರಭಾಗದಿಂದಲೇ ಹಬೆಯಿಂದ ಕಾಸಿ ಅನಂತರ ಚಾರ್ಜಿನ ಮೂಲಕ ಹಾಯಿಸುವುದು ಈಚಿನ ಪದ್ಧತಿ. ಚಾರ್ಜಿನ ಸ್ವಭಾವಕ್ಕೆ ಅನುಗುಣವಾಗಿ 70-160 ಪೌಂಡು ಒತ್ತಡ, 1050-1550 ಸೆ. ಉಷúತೆಯಲ್ಲಿ ಸುಮಾರು 10-12 ತಾಸುಗಳ ಕಾಲ ಪಚನಕ್ರ್ರಿಯೆ ನಡೆಯುವುದು. ಪಾಚಕದಿಂದ ಉತ್ಪನ್ನ ಒಂದು ಗುಂಡಿಗೆ ಬೀಳುತ್ತದೆ. ಇಲ್ಲಿ ಪಲ್ಪನ್ನು ಹೊಸ ನೀರಿನಿಂದ ತೊಳೆಯುವ ವ್ಯವಸ್ಥೆ ಇದೆ. ಬೇಗುದಿ ದ್ರಾವಕವನ್ನು ಪುನಃ ಉಪಯೋಗಿಸುವುದಿಲ್ಲ. ಅನಂತರ ಪಲ್ಪನ್ನು ಜರಡಿಗಳಿಗೆ ಪಂಪ್ ಮಾಡುವರು. ಇಲ್ಲಿ ಗಂಟುಗಳೂ ನಾರಿನ ದೊಡ್ಡ ಕಂತೆಗಳೂ ತಡೆಯಲ್ಪಡುವುವು. ಜರಡಿಗಳು ರವಾನಿಸಿದ ಪಲ್ಪು ಫೆಲ್ಟ್ ಒಳ ಕವಚವಿರುವ ಉದ್ದುದ್ದವಾದ ತೊಟ್ಟಿಗಳನ್ನು ತಲಪುವುದು. ಇವುಗಳಲ್ಲಿ 6 ಅಡಿಗಳ ಅಂತರದಲ್ಲಿ ಅಡ್ಡ ಪಟ್ಟಿಗಳಿವೆ. ಕಲ್ಮಷಗಳು ಕ್ರಮೇಣ ಒತ್ತರಿಸಲು ಇವು ಸಹಾಯಕ. ಪಾಚಕದಿಂದ ಪಲ್ಪು ಮಂದಕಾರಿಗಳಿಗೆ ಹೋಗುತ್ತದೆ. ಇವು ಕೊಳವೆಯಾಕಾರದ ಚೌಕಟ್ಟುಗಳು. 80 ಸೈಜಿನ ಕಂಚಿನ ತಂತಿ ವಂದರಿಯಿಂದ ಸಜ್ಜಾಗಿರುತ್ತದೆ. ಇದರ ಮೂಲಕ ನೀರು ಸೋರಿ ಹೋಗಿ ಪಲ್ಪು ಜರಡಿಯ ಮೇಲೆ ಉಳಿಯುತ್ತದೆ. ಚಲುವೆಕಾರಿಯನ್ನು ಹೊಕ್ಕ ಪಲ್ಪು ಈಗ ಕ್ಲೋರಿನ್ನಿನ ವರ್ತನೆಗೆ ಗುರಿಯಾಗುತ್ತದೆ. ಕ್ಲೋರೀನು ಖರ್ಚಾದ ಅನಂತರ ಸುಣ್ಣದ ಹಾಲನ್ನು ಸಿಂಪಡಿಸಿ ವಸ್ತುವನ್ನು ತಟಸ್ಥಗೊಳಿಸಬೇಕು. ಅನಂತರ ತೊಳೆದು ಪುನಃ ಮಂದಗೊಳಿಸಿ ಮಿಷನ್ ಚೆಸ್ಟಿಗೆ ಹಾಕುವರು. ಇಲ್ಲಿ ಪಲ್ಪು ಲ್ಯಾಪ್ ಆಗಿ 35% ಒಣಗುವುದು. ಹಬೆಯಿಂದ ಕಾದ ರೋಲರುಗಳು 80-90% ಒಣಗಿದ ಪಲ್ಪನ್ನು ನೀಡುವುವು.

ಬೇಗುದಿ ದ್ರಾವಕ ತಯಾರಿಸುವ ಸುಣ್ಣದ ಹಾಲಿನ ವಿಧಾನವಿರುವುದು ಸರಿಯಷ್ಟೆ. ಇದರಲ್ಲಿ ಮ್ಯಾಗ್ನೀಸಿಯಾದ ಪ್ರಮಾಣ ಹೆಚ್ಚಾಗಿರುವ ಸುಟ್ಟ ಬಿಸಿನೀರನ್ನು ಹಾಕಿ ದುರ್ಬಲ ದ್ರಾವಣ ಮಾಡಿಕೊಳ್ಳಲಾಗುವುದು. ಮ್ಯಾಗ್ನೀಸಿಯಾದ ಪ್ರಮಾಣ ಹೆಚ್ಚಾಗಿರುವುದು ಅಪೇಕ್ಷಣೀಯ. ಏಕೆಂದರೆ ಕ್ಯಾಲ್ಸಿಯಂ ಸಲ್ಫೈಟುಗಳು ಹೆಚ್ಚು ದ್ರಾವ್ಯವಾದ ವಸ್ತುಗಳು. ಅಲ್ಲದೆ ಕ್ಯಾಲ್ಸಿಯಂ ಸಲ್ಫೈಟುಗಳು ಒತ್ತರಿಸಿ ಕೊಳಾಯಿಗಳಲ್ಲಿ ಅಡಚಣೆಯುಂಟಾಗುವ ಸಾಧ್ಯತೆಯಿದೆ. ಈ ದ್ರಾವಣಕ್ಕೆ ಗಂಧಕದ ಡೈ ಆಕ್ಸೈಡನ್ನು ಕೂಡಿಸಿದರೆ ಬೇಗುದಿ ದ್ರಾವಕವಾಗುತ್ತದೆ. ನೇರ ಬೇಯಿಸುವ ವಿಧಾನದಲ್ಲಿ ಉಪಯೋಗಿಸುವ ಪಾಚಕದಲ್ಲಿ ಸೀಸ ಅಥವಾ ತಾಮ್ರದಿಂದ ಮಾಡಿದ ಸುರುಳಿ ಕೊಳವೆಗಳಿವೆ. ಪಚನ ಕಾಲ ಸುಮಾರು 58 ತಾಸುಗಳು. 1300 ಸೆ. ಉಷ್ಣತೆಯೂ ಚದುರಂಗುಲಕ್ಕೆ 60 ಪೌಂಡು ಒತ್ತಡವೂ ಅಗತ್ಯ. ಸಲ್ಫೈಟ್ ಪಲ್ಪ್ ಉತ್ತಮ ದರ್ಜೆಯದು. ಬಾಂಡ್ ಕಾಗದ ಮತ್ತು ಬರೆವಣಿಗೆಯ ಕಾಗದವನ್ನು ತಯಾರಿಸುವುದು ಇದರಿಂದಲೇ.

ಇಲ್ಲಿ ಉಳಿಯುವ ಸಲ್ಫೈಟ್ ದ್ರಾವಕದ ವಿನಿಯೋಗ ಒಂದು ಭಾರೀ ಸಮಸ್ಯೆ, ಇದುವರೆಗೆ ಅದನ್ನು ಸಮೀಪದಲ್ಲಿರುವ ಯಾವುದಾದರೂ ನದಿಗೆ ಬಿಡಲಾಗುತ್ತಿತ್ತು. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುಂದು ಎಂದು ಮನವರಿಕೆಯಾದ ಮೇಲೆ ಕಾನೂನಿನನ್ವಯ ಈ ಅಭ್ಯಾಸವನ್ನು ನಿಷೇಧಿಸಲಾಗಿದೆ. ಆದರೆ ಕಾನೂನಿನ ಭಯಕ್ಕಿಂತ ಆರ್ಥಿಕ ಕಾರಣಗಳಿಗೆ ಅದರ ವಿನಿಯೋಗ ಪ್ರಾಮುಖ್ಯವನ್ನು ಪಡೆದಿದೆ. ಅದರಿಂದ ಆಲ್ಕೊಹಾಲನ್ನು ತಯಾರಿಸುವ ಪ್ರಯತ್ನ ನಡೆದಿವೆ. ಅದರಲ್ಲಿರುವ ಲಿಗ್ನಿನಿಂದ ವ್ಯಾನಿಲಿನ್ ಮತ್ತು ಪ್ಲಾಸ್ಟಿಕ್ಕುಗಳನ್ನು ತಯಾರಿಸಬಹುದು. ಆಕ್ಸಾಲಿಕ್ ಆಮ್ಲ, ಚರ್ಮ ಹದಮಾಡಲು ಬೇಕಾದ ರಾಸಾಯನಿಕಗಳು, ವಿಶೇಷ ಸಿಮೆಂಟಗಳು ರಸ್ತೆ ದುರಸ್ತಿಗೆ ಉಪಯೋಗಿಸುವ ಅಂಟುವಸ್ತುಗಳು ಇತ್ಯಾದಿಗಳನ್ನೂ ಇದರಿಂದ ರೂಪಿಸಬಹುದು. ಆದರೆ ಈಚೆಗೆ ದ್ರಾವಕವನ್ನು ಸಾಕಷ್ಟು ಸಾಂದ್ರೀಕರಿಸಿ ಅನಂತರ ಉರಿಸಿ ನಾಶಪಡಿಸುವ ಕ್ರಮದತ್ತ ಒಲವು ಹೆಚ್ಚುತ್ತಿದೆ.

ಚಿಂದಿಯಿಂದ ಪಲ್ಪ್: ಉತ್ತಮ ದರ್ಜೆಯ ಕಾಗದವನ್ನು ಮಾಡಲು ಇದೇ ಆಧಾರ. ಹಳೆಯ ಚಿಂದಿಯಾದರೆ ಸಾರ್ವಜನಿಕರಿಂದಲೂ ಹೊಸ ಚಿಂದಿಯಾದರೆ ಬಟ್ಟೆ ಗಿರಣಿಗಳು ಮತ್ತು ಉಡುಪು ತಯಾರಿಕಾ ಕಾರ್ಖಾನೆಗಳಿಂದಲೂ ಸರಬರಜಾಗುತ್ತದೆ. ಇದನ್ನು ಬಡಿದು ದೂಳು ತೆಗೆದು ಬಣ್ಣದ ಪ್ರಕಾರ ವಿಂಗಡಿಸುವರು. ಚಲುವೆಗೊಳಿಸಲು ಕಷ್ಟವಾದ ಬಣ್ಣವಿದ್ದರೆ ಅಂಥ ಚಿಂದಿಯನ್ನು ಮಾಸಲು ಬಣ್ಣದ ಕಾಗದಕ್ಕೆ ಪರಿವರ್ತಿಸುವರು. ಚಲುವೆ ಮಾಡಲು ಸಾಧ್ಯವಾದ ಬಣ್ಣವನ್ನು ಹೊಂದಿದ್ದರೆ ತಿಳಿಬಣ್ಣದ ಕಾಗದದ ತಯಾರಿಕೆಗೆ ವಿನಿಯೋಗವಾಗುತ್ತದೆ. ಚಿಂದಿಯನ್ನು ವಿಂಗಡಿಸಿದ ಮೇಲೆ ಸಣ್ಣ ಚೌಕಾಕರದ ಚೂರುಗಳಾಗಿ ಕತ್ತರಿಸಿ ದೂಳು ಹೊಡೆದು ಕಾಂತಗಳ ಮೇಲೆ ಹಾಯಿಸಿದರೆ ಲೋಹವಸ್ತುಗಳು ನಿವಾರಣೆಯಾಗುವುವು. ಅನಂತರ ಬೇಯಿಸಲಾಗುವುದು. ಈ ಹಂತದಲ್ಲಿ ನಾರುಗಳಿದ್ದ ಮೇಣ, ಅಂಟುಗಳು, ಕೊಳೆ ಮತ್ತು ವರ್ಣದ್ರವ್ಯಗಳು ತೊಡೆದು ಹೋಗುವುವು. ಇಲ್ಲಿ ಉಪಯೋಗಿಸುವ ಬೇಗುದಿ ದ್ರಾವಕದಲ್ಲಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಇರುತ್ತದೆ. ಇದರೊಂದಿಗೆ ಕಾಸ್ಟಿಕ್ ಸೋಡಾ ಬೂದಿ ಇರುವುದುಂಟು. ಪಾಚಕ ಕೊಳವೆಯಾಕಾರದಲ್ಲಿದ್ದು ಆವರ್ತಿಸುತ್ತಿರುತ್ತದೆ. ಇದರಲ್ಲಿ 5 ಟನ್ ಚಿಂದಿಯನ್ನು ತುಂಬಬಹುದು. 1200 ಸೆ. ಉಷ್ಣತೆಯಲ್ಲಿ 10-12 ಗಂಟೆಗಳ ಕಾಲ ಪಚನ ಕ್ರಿಯೆ ಮುಂದುವರಿಯುವುದು. ಬಂದ ಪಲ್ಪನ್ನು ಕ್ಲೋರೀನ್ ಅಥವಾ ಕ್ಯಾಲ್ಸಿಯಂ ಹೈಪೊಕ್ಲೊರೈಟಿನಿಂದ ಚಲುವೆ ಮಾಡಿ ಪುನಃ ತೊಳಯಲಾಗುವುದು. ಇಂಥ ಪಲ್ಪಿನಿಂದ ಉತ್ತಮ ಗುಣದ, ಬರೆಯುವ ಕಾಗದವನ್ನು ಮಾಡಬಹುದು.

ಕಾಗದದ ತಯಾರಿಕೆ: ಮೇಲೆ ಹೇಳಿದ ವಿವಿಧ ಪಲ್ಪುಗಳು ಹಾಳೆಗಳಂತೆ ಇರುವುವು. ಆದರೆ ಅವುಗಳಿಗೆ ಉತ್ತಮ ಮೇಲ್ಮೈ, ಅಪಾರಕತೆ, ತ್ರಾಣ ಮತ್ತು ಸ್ಪರ್ಶಭಾವ ಮೊದಲಾದ ಸಿದ್ದ ಕಾಗದಕ್ಕಿರುವ ಗುಣಗಳು ಇರುವುದಿಲ್ಲ. ಎರಡು ಪ್ರಧಾನ ಹಂತಗಳಲ್ಲಿ ಪಲ್ಪು ಕಾಗದವಾಗಿ ಪರಿವರ್ತನೆ ಹೊಂದುತ್ತದೆ. ಮೊದಲನೆಯದು: ತಾಡನ(ಬೀಟಿಂಗ್), ಎರಡನೆಯದು: ಸಂಸ್ಕರಣ(ರಿಫೈನಿಂಗ್), ಇವೆರಡು ಕ್ರಿಯೆಗಳ ನಡುವಣ ವ್ಯತ್ಯಾಸ ಅಲ್ಪ. ಕಾರ್ಖಾನೆಗಳು ಇವುಗಳ ಪೈಕಿ ಯಾವುದೇ ಒಂದನ್ನು ಅಥವಾ ಎರಡನ್ನು ಬಳಸುವುದುಂಟು.

ಜನಪ್ರಿಯವಾದ ತಾಡನ ಯಂತ್ರವೆಂದರೆ ಹಾಲೆಂಡರ್, ಇದರ ವಿವರಗಳು ಚಿತ್ರ 8ರಲ್ಲಿವೆ. ಇದೊಂದು ಅಂಡಾಕಾರದ ತೊಟ್ಟಿ. ಮರ ಅಥವಾ ಲೋಹದಿಂದ ಮಾಡಿದುದು. ಮಧ್ಯಭಾಗದಲ್ಲಿ ಗೋಡೆಯಂಥ ವಿಭಾಜಕವೊಂದಿದೆ. ಇದರಿಂದ ಪಲ್ಪಿನ ಚಲನೆಗೆ ಅಂಡಾಕಾರದ ಕಾಲುವೆ ದೊರೆತಂತಾಗುವುದು. ತೊಟ್ಟಿಯ ತಳದಲ್ಲಿರುವ ಮರದ ಬೆಡ್ಡಿನಲ್ಲಿ ಲೋಹದ ಪಟ್ಟಿಗಳನ್ನು ಭದ್ರವಾಗಿ ನೆಟ್ಟಿರುತ್ತಾರೆ. ಈ ಆಧಾರದ ಮೇಲೆ ಲೋಹದ(ಬ್ಲೇಡು)ಅಲಗುಗಳಿರುವ ಒಂದು ರೋಲರು ತಿರುಗುವುದು. ರೋಲರನ್ನು ಮೇಲೆ ಕೆಳಗೆ ಏರಿಸಿ ಇಳಿಸಬಹುದು. ಇದರಿಂದ ರೋಲರು ಮತ್ತು ಬೆಡ್‍ಪ್ಲೇಟಿನ ನಡುವಣ ಅಂತರವನ್ನು ನಮ್ಮ ಇಷ್ಟಾನುಸಾರ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಇವೆರಡರ ಮಧ್ಯೆ ಅನಿವಾರ್ಯವಾಗಿ ಹಾಯಲೇ ಬೇಕಾದ ಪಲ್ಪು ಗಟ್ಟಿಸಲ್ಪಟ್ಟು ನಿರೀಕ್ಷಿತ ಫಲ ಪ್ರಾಪ್ತವಾಗುವುದು. ಗಟ್ಟಣೆಯಾದ ನಾರಿನಿಂದ ಮಾಡಿದ ಕಾಗದಕ್ಕೆ ತ್ರಾಣ ಹೆಚ್ಚು. ಇದು ಏಕರೀತಿಯಾಗಿದ್ದು ಹೆಚ್ಚು ಸಾಂದ್ರ ಮತ್ತು ಅಪಾರಕವಾಗಿರುವುದು. ಅಷ್ಟು ರಂಧ್ರಮಯವಾಗಿರುವುದಿಲ್ಲ. ಫಿಲ್ಟರುಗಳು, ಬಣ್ಣಗಳು ಮತ್ತು ಸೈಜಿಂಗ್ ರಾಸಾಯನಿಕಗಳನ್ನು ಕಾಗದಕ್ಕೆ ಮೈಗೂಡಿಸುವುದು ತಾಡನ ಯಂತ್ರದಲ್ಲೇ. ಇವು ಸರದಿಯ ಪ್ರಕಾರ ಕೆಲಸ ಮಾಡುವುದರಿಂದ ಕೆಲವು ಕಾರ್ಖಾನೆಗಳು ತಾಡನ ಯಂತ್ರಗಳನ್ನು ಉಪಯೋಗಿಸುವುದೇ ಇಲ್ಲ; ಕೇವಲ ಸಂಸ್ಕರಣ ಯಂತ್ರಗಳನ್ನು ಬಳಸುತ್ತವೆ. ಇವು ಅಹರ್ನಿಶೆ ಕೆಲಸ ಮಾಡಬಲ್ಲವು. ಆದರೆ ಉತ್ತಮ ದರ್ಜೆಯ ಕಾಗದದ, ಉತ್ಪಾದನೆಯಲ್ಲಿ ಎರಡು ಯಂತ್ರಗಳನ್ನೂ ಹೂಡುವುದು ವಿಧಿವತ್ತಾದ ಪದ್ಧತಿ.

ಜೋರ್ಡಾನ್ ಎಂಜಿನ್ ಆದರ್ಶ ಸಂಸ್ಕರಣ ಯಂತ್ರವೆನಿಸಿಕೊಂಡಿದೆ, ಅದೊಂದು ಶಂಕ್ವಾಕೃತಿಯ ಕೋಶ. ಅದರೊಳಗೆ ಅದೇ ಆಕಾರದ ಮತ್ತೊಂದು ಕೋಶ ಚಲಿಸುತ್ತಿರುತ್ತದೆ. ಒಳಕೋಶದ ಹೊರಭಾಗ ಮತ್ತು ಹೊರಕೋಶದ ಒಳಭಾಗಗಳು ಲೋಹದ ಪಟ್ಟಿಗಳಿಂದ ಸಜ್ಜಾಗಿರುತ್ತವೆ. ಇವೆರಡರ ನಡುವೆ ಸಿಕ್ಕಿಬಿದ್ದ ಪಲ್ಪು ಅರೆದಂತಾಗಿ ಶಂಕುವಿನ ದೊಡ್ಡ ಬಾಯಿಯ ಬಳಿ ಹೊರಬೀಳುವುದು. ಈ ಎಂಜಿನ್ನಿನ ಕಾರ್ಯವಿಧಾನವನ್ನು ಮುಂದಿನ ಚಿತ್ರದಲ್ಲಿ ಸೂಚಿಸಿದೆ. ಫಿಲ್ಲರುಗಳು, ಸೈಜಿಂಗ್ ರಾಸಾಯನಿಕಗಳು ಮತ್ತು ಬಣ್ಣಗಳನ್ನು ಹಾಲೆಂಡರ್, ಅಥವಾ ಜೋರ್ಡಾನಿ, ಅಥವಾ ಎರಡರಲ್ಲೂ ಕೂಡಿಸಬಹುದು. ಹಾಲೆಂಡರಿನಲ್ಲಿ ಈ ವಸ್ತುಗಳನ್ನು ಕೂಡಿಸುವ ಕ್ರಮ ಆಯಾ ಕಾರ್ಖಾನೆಯ ವೈಶಿಷ್ಟ್ಯವಾಗಿದ್ದರೂ ಸಾಮಾನ್ಯವಾಗಿ ಅದು ಹೀಗಿರುವುದು: 1, ವಿವಿಧ ನಮೂನೆಯ ಪಲ್ಪುಗಳನ್ನು ಮಿಳಿತ ಮಾಡಿ ಅಪೇಕ್ಷಿತ ಸಾಂದ್ರತೆಯನ್ನು ಪಡೆಯುವುದು. 2, ನಾರಿನೊಡನೇಯೇ ಫಿಲ್ಲರ್ ಸೇರಿಸುವುದು. 3, ಸಾಕಷ್ಟು ಗಟ್ಟಿಣೆಯಾದ ಅನಂತರ ಸೈಜಿಂಗ್ ರಾಸಾಯನಿಕವನ್ನು ಕೂಡಿಸಿ ಸಮಾನ ಮಿಶ್ರಣವಾಗುವಂತೆ ಕಲಸುವುದು. 4, ಬಣ್ಣವನ್ನು ಸೇರಿಸಿ ಅದು ಪಲ್ಪಿನಲ್ಲೆಲ್ಲ ಸಮನಾಗಿ ಹಂಚಿಹೋಗುವಂತೆ ಮಾಡುವುದು. 5, ಪಟಿಕವನ್ನು ಬೆರೆಸುವುದರಿಂದ ಗರಣೆ ಗಟ್ಟಿಸಿ ಎಳೆಗಳ ಮೇಲೆ ಅಪೇಕ್ಷಿತ ಹೊದಿಕೆ ಮೂಡುವಂತೆ ನೋಡಿಕೊಳ್ಳುವುದು.

ಹೀರುವ ಗುಣವುಳ್ಳ ಟಿಷ್ಯೂ ಮತ್ತು ಒತ್ತುವ ಕಾಗದಗಳನ್ನು ಬಿಟ್ಟರೆ ಉಳಿದೆಲ್ಲ ಕಾಗದಕ್ಕೂ ಫಿಲ್ಲರುಗಳನ್ನು ಸೇರಿಸಲೇಬೇಕು. ಎಳೆಗಳ ನಡುವೆ ಖಾಲಿ ಸ್ಥಳಗಳನ್ನು ತುಂಬುವುದು ಇದರ ಉದ್ದೇಶ. ತತ್ಪಲವಾಗಿ ಕಾಗದಕ್ಕೆ ಮೆದು ಮೇಲ್ಮೈ, ಶುಭ್ರವಾದ ಬಿಳಿಯ ಬಣ್ಣ, ಮುದ್ರಣಸಾಧ್ಯತೆ ಮತ್ತು ಅಧಿಕ ಅಪಾರಕತೆ ಪ್ರಾಪ್ತವಾಗುವುವು. ಫಿಲ್ಲರುಗಳು ಸಾಮಾನ್ಯವಾಗಿ ಇನಾಗ್ರ್ಯಾನಿಕ್ ವಸ್ತುಗಳು. ಟಾಲ್ಕ್ ಮತ್ತು ಜೇಡಿಯ ಮಣ್ಣಿನಂಥ ನೈಸರ್ಗಿಕ ವಸ್ತುಗಳನ್ನಾಗಲೀ ಕೃತಕವಾಗಿ ಪಡೆದ ಒತ್ತರಿಸಿದ ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಟಿಟ್ಯಾನಿಯಂ ಡೈ ಆಕ್ಸೈಡನ್ನಾಗಲೀ ಉಪಯೋಗಿಸಬಹುದು. ಆದರೆ ಎಲ್ಲವನ್ನು ನುಣ್ಣಗೆ ಪುಡಿ ಮಾಡಿಟ್ಟಿರಬೇಕು.

ಹೀರುವ ಕಾಗದಗಳಿಗೆ ಸೈಜಿಂಗ್ ಸೇರಿಸುವ ಅಗತ್ಯವಿಲ್ಲ. ಏಕೆಂದರೆ ಅದನ್ನು ಹಾಕುವುದೇ ಕಾಗದ ದ್ರವಗಳನ್ನು ಹೀರದಂತೆ ಮಾಡಲು, ಸೈಜಿಂಗನ್ನು ತಾಡನ ಹಂತದಲ್ಲೇ ಕೂಡಿಸಿ ಬಿಡಬಹುದು. ಇಲ್ಲವೆ ಕಾಗದ ಸಿದ್ಧವಾದ ಅನಂತರ ಅದರ ಮೈಮೇಲೆ ಲೇಪಿಸಬಹುದು. ಸೈಜಿಂಗ್ ವಸ್ತು ರಾಳವನ್ನು ಕ್ಷಾರದಿಂದ ಜಲ ವಿಶ್ಲೇಷಿಸಿ ಪಡೆದ ಸಾಬೂನಾಗಿರಬಹುದು ಅಥವಾ ಮೇಣದ ಎಮಲ್ಷನ್ ಆಗಿರಲು ಸಾಕು. ಅನಂತರ ಇದಕ್ಕೆ ಜಲಯುಕ್ತ ಅಲ್ಯೂಮಿನಿಯಂ ಸಲ್ಫೇಟನ್ನು ಂಟ2(Sಔ4)3. 18ಊ2ಔ ಕಾಗದ ತಯಾರಿಸುವವರು ಇದನ್ನು ಪಟಿಕವೆಂದೇ ಕರೆಯುತ್ತಾರೆ-ಸೇರಿಸಿದರೆ ಸೈಜು ಒತ್ತರಿಸುವುದು. ಪರಿಣಾಮವಾಗಿ ಎಳೆಗಳ ಮೇಲೆ ಲೋಳೆಯಂಥ ಪದರವಾಗಿ ಇದು ಸಂಯೋಜಿತ ಜಲವನ್ನು ಕಳೆದುಕೊಂಡು ಗಡಸಾದ ಮೇಲ್ಮೈ ಮೂಡುವುದು. ಒಣಗಿದ ಕಾಗದಕ್ಕೆ ಅಥವಾ ತಾಡನ ಹಂತದಲ್ಲಿ ಭಾಗಶಃ ಸೈಜಾಗದಿರುವ ಕಾಗದಕ್ಕೆ ಟಬ್ ಸ್ಶೆಜಿಂಗ್ ಮಾಡಬೇಕು. ಇದಕ್ಕಾಗಿ ಪ್ರಾಣಿಮೂಲದ ಅಂಟುಗಳು, ಪರಿವರ್ತಿತ ಪಿಷ್ಟಗಳು ಮೊದಲಾದುವನ್ನು ಉಪಯೋಗಿಸುವುದು ರೂಢಿ. ಇದರ ಪ್ರಯೋಗ ಕಾಗದ ರೂಪಿಸುವ ಯಂತ್ರದಲ್ಲಿ ಅಥವಾ ಸೈಜಿಂಗ್ ಪ್ರೆಸ್ಸಿನಲ್ಲಿ ವಾಯುಶೋಷಕ (ಏರ್ ಡ್ರೈಯಿಂಗ್) ವಿಧಾನದಿಂದ ನಡೆಯುವುದು. ಸೈಜಿಂಗ್ ಬಾತಿನ ಮೂಲಕ ಹಾದು ಬಂದ ಕಾಗದ ರೋಲರುಗಳಲ್ಲಿ ಹೆಚ್ಚುವರಿ ಸೈಜಿಂಗ್ ವಸ್ತುವನ್ನು ಕಳೆದುಕೊಂಡು ಅಂತಿಮವಾಗಿ ಶುಷ್ಕಕಾರಕ ರೋಲರುಗಳ ಮೇಲೆ ಹಾಯುವುದು. ಇಂಥ ಸೈಜಿಂಗ್ ವಿಧಿಗೆ ಒಳಪಡಿಸುವುದರಿಂದ ಕಾಗದದ ಜಲನಿರೋಧಕ ಶಕ್ತಿ ಹೆಚ್ಚುತ್ತದೆ. ಮಸಿಯನ್ನದು ಸಮನಾಗಿ ಹೀರುತ್ತದೆ. ಬರೆಹ ಅಲ್ಲಲ್ಲಿ ಅಸ್ಪಷ್ಟವಾಗುದಿಲ್ಲ. ಬರವಣಿಗೆಯನ್ನು ಉಜ್ಜಿ ಅಳಿಸಿ ಆ ಸ್ಥಳದಲ್ಲೇ ಪುನಃ ಬರೆದಾಗ ಮಸಿ ಹರಡಿ ಅಂದಗೆಡುವ ಸಂಭವ ಕಡಿಮೆ.

ಬಣ್ಣ ಕೂಡಿಸದ ಕಾಗದ ಅಪೂರ್ವ. ಸುಮಾರು 98% ಕಾಗದಕ್ಕೆ ಒಂದಲ್ಲ ಒಂದು ರೀತಿಯ ಬಣ್ಣವನ್ನು ಸೇರಿಸಿರುತ್ತಾರೆ. ಇದನ್ನು ತಾಡನ ಹಂತದಲ್ಲೇ ಮಿಶ್ರಮಾಡುವುದು ಸಾಮಾನ್ಯ. ಅನಂತರ ಕಾಗದದ ಹೊರಮೈಗೆ ಯಾವ ಬಣ್ಣವನ್ನಾದರೂ ಹಚ್ಚಿ ನಿರ್ದಿಷ್ಟ ಬಣ್ಣದ ಕಾಗದವನ್ನು ಪಡೆಯಲು ಸಾಧ್ಯ. ಆಮ್ಲೀಯ, ಕ್ಷಾರೀಯ, ನೇರ ಅಥವಾ ಗಂಧಕಯುಕ್ತ ಬಣ್ಣಗಳಲ್ಲಿ ಯಾವುದನ್ನಾದರೂ ಉಪಯೋಗಿಸಬಹುದು. ಸೆಲ್ಯುಲೋಸಿನ ಎಳೆಗಳಿಗೆ ಆಮ್ಲೀಯ ಬಣ್ಣಗಳ ಬಗ್ಗೆ ಒಲವು ಕಡಿಮೆ. ಆದ್ದರಿಂದ ಸ್ಥಾಪಕಗಳ (ಮಾರ್ಡಂಟ್) ಅಗತ್ಯ ಬೀಳುತ್ತದೆ. ತಾಡನ ಯಂತ್ರದಲ್ಲೇ ಕಾಗದಕ್ಕೆ ಬಣ್ಣ ಕೊಟ್ಟಿದ್ದ ಪಕ್ಷದಲ್ಲಿ ಸೈಜನ್ನು ಒತ್ತರಿಸಲು ಹಾಕಿದ್ದ ಪಟಿಕವೇ ಸ್ಥಾಪಕವಾಗಿಯೂ ವರ್ತಿಸಿ ಉಪಕರಿಸುತ್ತದೆ.

ಕಾಗದದ ಹಾಳೆಯನ್ನು ರೂಪಿಸುವ ಯಂತ್ರಗಳಲ್ಲಿ ಎರಡು ಬಗೆಯಿದೆ. ಮೊದಲನೆಯದು ಫೋರ್ ಡ್ರಿನಿಯರ್ ಯಂತ್ರ. ಸುಮಾರು 0.5% ನಾರು ಇರುವ ಪಲ್ಪಿನ ಸಂಗ್ರಹ ಜರಡಿಯಾಡಿಸಲ್ಪಟ್ಟು ಶಿರೋಕರಂಡವನ್ನು (ಹೆಡ್ ಬಾಕ್ಸ್) ಪ್ರವೇಶಿಸುವುದು. ಇಲ್ಲಿಂದ ಕಾಲುವೆಯ ಮೂಲಕ ಕಂಚಿನ ತಂತಿ ವಂದರಿಯ ಮೇಲಕ್ಕೆ ಹರಿದು ಬರುವುದು. ಇದು ಅನಂತವಾಗಿದ್ದು ಚಲಿಸುತ್ತಿರುತ್ತದೆ. ಬಹುಪಾಲು ನೀರು ಸೋರಿ ಹೋಗಿ ಪಲ್ಪಿನ ಎಳೆಗಳು ಜರಡಿಯ ಮೇಲೆ ಉಳಿಯವುವು. ಈ ಜರಡಿ ಸರಿದಂತೆಲ್ಲ ಅಕ್ಕಪಕ್ಕಕ್ಕೆ ಅಲ್ಲಾಡುತ್ತ ಹೋಗುವುದರಿಂದ ಎಳೆಗಳ ಜೋಡಣೆಯಾಗಿ ಹಾಳೆಗೆ ತ್ರಾಣ ಬರುವುದು. ಜರಡಿಯ ಮೇಲಿರುವಾಗಲೇ ಕಾಗದ ಚೋಷಕಕೋಶದ (ಸಕ್ಷನ್ ಬಾಕ್ಸ್) ಮೇಲೆ ಹಾಯುವುದು. ಇದರಿಂದ ಜಲಾಂಶದ ನಿವಾರಣೆಯಾಗುತ್ತದೆ. ಡ್ಯಾಂಡಿ ರೋಲರುಗಳ ಅಡಿಯಲ್ಲಿ ನುಸಳಿದಾಗ ಹಾಳೆಯ ಮೇಲ್ಭಾಗ ನುಣುಪಾಗುವುದು. ಸೂಕ್ತ ವೇಗದಲ್ಲಿ ಜರಡಿಯ ಬದಿಯಲ್ಲೇ ಚಲಿಸುವ ರಬ್ಬರಿನ ಪಟ್ಟಿಗಳು ಕಾಗದಕ್ಕೆ ಅಂಚು ಕಟ್ಟುತ್ತವೆ.

ತಂತಿ ವಂದರಿಯಿಂದ ಕಾಗದ ಮೊದಲನೆಯ ಫೆಲ್ಟ್ ಹಾಸಿಗೆ ರವಾಸಿಸಲ್ಪಡುತ್ತದೆ. ಇದು ಕಾಗದವನ್ನು ಪ್ರೆಸ್ ರೋಲರುಗಳ ಮೂಲಕ ಒಯ್ದಾಗ ಮತ್ತಷ್ಟು ನೀರು ಹಿಂಡಲ್ಪಟ್ಟು ಅಪೇಕ್ಷಿತ ಜಲಚಿಹ್ನೆ (ವಾಟರ್ ಮಾರ್ಕ್) ಕಾಗದಲ್ಲಿ ಮೂಡುತ್ತದೆ. ಮುಂದೆ ಉಕ್ಕಿನ ರೋಲರುಗಳ ಮೂಲಕ ಎರಡನೆಯ ಫೆಲ್ಟ್ ಹಾಸನ್ನು ತಲಪುತ್ತದೆ. ಆಂತರಿಕವಾಗಿ ಹಬೆಯಿಂದ ಕಾದ ರೋಲರುಗಳ ಮೂಲಕ ಕಾಗದವನ್ನು ಸಾಗಿಸುವುದು ಇದರ ಕರ್ತವ್ಯ. 60-70% ತೇವಾಂಶವಿದ್ದ ಕಾಗದ ಈಗ 90-94% ಒಣಗಿ ಹೊರಬರುವುದು. ಈ ಘಟ್ಟದಲ್ಲಿ ಕಾಗದಕ್ಕೆ ಸೈಜಿಂಗನ್ನು ಸಿಂಪಡಿಸಬಹುದು. ಇನ್ನೊಂದು ಸಾಲು ಶುಷ್ಕಕಾರಕ ರೋಲರುಗಳು ಮೂಲಕ ಹಾದುಬಂದ ಹೊರತು ಕಾಗದ ಕ್ಯಾಲೆಂಡರನ್ನು ಪ್ರವೇಶಿಸುವಂತಿಲ್ಲ. ಭಾರವಾದ ಉಕ್ಕಿನ ರೋಲರುಗಳ ಸಾಲಿದು. ಕಾಗದಕ್ಕೆ ಹೊಳಪು ಬರುವುದು ಇದರಿಂದಲೇ. ಸಿದ್ಧ ಕಾಗದವನ್ನು ಸಿಂಬಿಗಳಿಗೆ ಸುತ್ತಲಾಗುವುದು.

ಕಾಗದ ಒಣಗಿದಂತೆ ಕುಗ್ಗುವುದಷ್ಟೆ. ಇದರ ದೆಸೆಯಿಂದ ವಿವಿಧ ರೋಲರುಗಳ ಚಲನ ವೇಗದಲ್ಲಿ ಸಾಮರಸ್ಯ ಸಾಧಿಸುವ ದೊಡ್ಡ ಸಮಸ್ಯೆ ಏಳುತ್ತದೆ. ಈ ಯಂತ್ರದ ರೋಲರುಗಳು ಉತ್ತಮ ದರ್ಜೆಯ ಕಾಗದವನ್ನು ತಯಾರಿಸುವಾಗ ಮಿನಿಟಿಗೆ 200 ಅಡಿಗಳಷ್ಟು ಪತ್ರಿಕಾ ಕಾಗದವನ್ನು ಉತ್ಪಾದಿಸುವಾಗ 1,700 ಅಡಿಗಳಷ್ಟೂ ಗಮಿಸುವುವು.

ಸಿಲಿಂಡರ್ ಯಂತ್ರ: ದಪ್ಪ ಕಾಗದ, ರಟ್ಟು ಮತ್ತು ಒರಟು ಕಾಗದವನ್ನು ತಯಾರಿಸಲು ಬಳಸುವ ಸಾಧನವಿದು. ಅನೇಕ ಹಾಳೆಗಳನ್ನು ಕೂಡಿಸಿ ದಪ್ಪ ಹಾಳೆಯನ್ನಾಗಿ ಮಾಡುವುದು ಇದರ ಕೆಲಸ. ಇದರಲ್ಲಿ 4-7 ಬಾನಿಗಳಿವೆ. ಇವುಗಳಿಗೆ ಒಂದೇ ತೆರನಾದ ಅಥವಾ ವಿವಿಧ ದರ್ಜೆಯ ಜಲಮಿಶ್ರಿತ ಪಲ್ಪನ್ನು ಒದಗಿಸುತ್ತಾರೆ. ಪ್ರತಿಯೊಂದು ಬಾನೆಯಲ್ಲೂ ತಂತಿಯ ಹೊದಿಕೆಯಿರುವ ಕೊಳವೆಯೊಂದು ಚಲಿಸುತ್ತಿರುತ್ತದೆ. ಎಲ್ಲ ನೀರೂ ಬೇರ್ಪಟ್ಟು ಕಾಗದ ತಂತಿಯ ಬಲೆಗೆ ಸುತ್ತಿಕೊಳ್ಳುವುದು. ಸಿಲಿಂಡರು ದೂರ ಸರಿದಂತೆ ಮೇಲೇರಿ ಬಂದ ಒದ್ದೆ ಕಾಗದ ಚಲಿಸುವ ಫೆಲ್ಟೊಂದಕ್ಕೆ ಮೆತ್ತಿಕೊಳ್ಳುತ್ತದೆ. ಇದು ಒಂದು ರೋಲರಿನ ಅಡಿಯಲ್ಲಿ ಹಾದು ನೀರಿನ ಸ್ವಲ್ಪ ಭಾಗವನ್ನು ಕಳೆದುಕೊಂಡು ಮತ್ತೊಂದು ಸಿಲಿಂಡರಿನ ಮೇಲ್ಭಾಗವನ್ನು ತಲಪುವುದು. ಈಗ ಇನ್ನೊಂದು ಪದರ ಒದ್ದೆ ಕಾಗದ ಮೆತ್ತಿಕೊಳ್ಳವುದು. ಹೀಗೆ ಮೇಲಿಂದ ಮೇಲೆ ಒದ್ದೆ ಕಾಗದದ ಪದರಗಳು ಅಂಟಿಕೊಂಡು ಸಂಘಟಿತ ದಪ್ಪ ಹಾಳೆ ಅಥವಾ ರಟ್ಟಾಗುವುದು. ಇದನ್ನು ಎಂದಿನಂತೆ ಒಣಗಿಸಬಹುದು. ಇಂಥ ಕಾಗದದ ಹೊರಮೈ ಉತ್ತಮ ಪಲ್ಪಿನಿಂದ ರೂಪಿತವಾಗಿದ್ದು ಒಳಪದರಗಳು ಕೀಳುದರ್ಜೆಯ ಯಾಂತ್ರಿಕ ಪಲ್ಪಿನಿಂದಾಗಿರಬಹುದು.

ಮಸಿ ತೊಳೆಯುವಿಕೆ: ಹಳೆಯ ಕಾಗದದಿಂದ ಹೊಸ ಸರಕನ್ನು ಉತ್ಪಾದಿಸುವಾಗ ಹೀಗೆ ಮಾಡಲೇಬೇಕು. ರಾಸಾಯನಿಕ ಮತ್ತು ಯಾಂತ್ರಿಕ ವಿಧಾನಗಳ ಹೊಂದಾಣಿಕೆಯಿಂದ ಇದನ್ನು ಸಾಧಿಸಬೇಕಾಗುತ್ತದೆ. ಹಳೆಯ ಕಾಗದವನ್ನು ವಿಂಗಡಿಸಿ ಕತ್ತರಿಸಿ ದೂಳು ಹೊಡೆದು ಬೇಯಿಸಲಾಗುವುದು. ಪಾಚಕ ತೆರೆದ ಬಾಯಿಯ ತೊಟ್ಟಿಯಾಗಿರಬಹುದು, ಅಥವಾ ಚಾಲಿತ ಕುದಿಪಾತ್ರೆಯಾಗಿರಬಹುದು. ಎರಡು ಸಂದರ್ಭಗಳಲ್ಲೂ ಹಬೆಯನ್ನು ನೇರವಾಗಿ ಹಾಯಿಸುವರು. 930 ಸೆ. ಉಷ್ಣತೆಯಲ್ಲಿ ಸುಮಾರು 10 ತಾಸು ಕುದಿಸಲಾಗುವುದು. ಬೇಗುದಿ ದ್ರಾವಕದಲ್ಲಿ ಸುಮಾರು 8% ಕಾಸ್ಟಿಕ್ ಸೋಡಾ ಇರುತ್ತದೆ. ಪಚನಕ್ರಿಯಾ ಕಾಲದಲ್ಲಿ ಮಸಿ ತನ್ನ ವಾಹಕದಿಂದ ಬೇರ್ಪಡುವುದು. ಮಂದಕಾರಿಗಳನ್ನು ಹೋಲುವ ಜರಡಿಗಳ ಮೂಲಕ ಬೇಯಿಸಿದ ಪಲ್ಪನ್ನು ಶೋಧಿಸಿದಾಗ ಕೊಳೆ ಮತ್ತು ಮಸಿಯಿಂದ ಬಿಡುಗಡೆಯಾದ ಇಂಗಾಲಗಳು ನಿವಾರಿಸಲ್ಪಡುತ್ತವೆ. ಮಾರ್ಜನಕ್ಕೆ ಮುಂಚೆ ಪಲ್ಪನ್ನು ತಾಡನ ಯಂತ್ರಕ್ಕೆ ಒಡ್ಡವುದು ಒಳ್ಳೆಯದು. ಎಳೆಗಳಿಂದ ಮಸಿಯನ್ನು ಕಳೆಯಲು ಇದು ಅನುಕೂಲ ಮಾಡಿಕೊಡುತ್ತದೆ. ತೊಳೆದ ಪಲ್ಪನ್ನು ಕ್ಲೋರಿನ್ನಿನಿಂದಾಗಲೀ ಕ್ಯಾಲ್ಸಿಯಂ ಹೈಪೊಕ್ಲೋರೈಟಿನಿಂದಾಗಲೀ ಚಲುವೆ ಮಾಡಿದರೆ ಶುಭ್ರವಾದ ಹಾಲು ಬಿಳುಪಿನ ಪಲ್ಪು ದೊರೆಯುವುದು. ಇದನ್ನು ಇತರ ಪಲ್ಪುಗಳೊಂದಿಗೆ ಧಾರಾಳಾವಾಗಿ ಬೆರೆಸಿ ನಾನಾ ಉತ್ತಮ ದರ್ಜೆಯ ಕಾಗದಗಳನ್ನು ಮಾಡಿಕೊಳ್ಳಬಹುದು.

ಹಳೆಯ ಟೆಲಿಫೋನ್ ಕೈಪಿಡಿಗಳ ವಿನಿಯೋಗಕ್ಕಾಗಿಯೇ ರೂಪಿಸಿರುವ ವಿಶೇಷ ಮಸಿ ತೊಳೆಯುವ ವಿಧಾನವೊಂದಿದೆ. ಕಾಗದದ ಮೇಲೆ ಹೆಮಟಿನ್ ವರ್ಣ ದ್ರವ್ಯವಿರುವ ಮಸಿಯಿಂದ ಮುದ್ರಿಸುವರು. ಇದನ್ನು ಸಲಾಕೆ ಗಿರಣಿಗಳಲ್ಲಿ (ರಾಡ್ ಮಿಲ್ಸ್) ಛಿದ್ರ ಮಾಡಿ ವ್ಯಾಪಕಗಳಲ್ಲಿ (ಡಿಫ್ಯೂಸರ್ಸ್) ಗಂಧಕದ ಡೈ ಆಕ್ಸೈಡಿನ ಪ್ರಭಾವಕ್ಕೆ ಗುರಿಪಡಿಸುತ್ತಾರೆ. ಇದು ಮಸಿಯನ್ನು ತೊಡೆದು ಹಾಕುವುದು. ಮೊದಲು ಲೀಟರಿಗೆ 6 ಗ್ರಾಂ ಗಂಧಕದ ಡೈಆಕ್ಸೈಡ್ ಇರುವ ದ್ರಾವಣವನ್ನೂ ಅನಂತರ ಲೀಟರಿಗೆ 4 ಗ್ರಾಂ ಅನಿಲವಿರುವ ದುರ್ಬಲ ದ್ರಾವಣವನ್ನೂ ಪ್ರಯೋಗಿಸುವುದು ಪಧ್ದತಿ. ಮಸಿ ಮುಕ್ತವಾದ ಪಲ್ಪು ಕ್ರಮವಾಗಿ ಸ್ಟಫ್ ಚೆಸ್ಟ್, ಆವರ್ತ ಸೋಸಣಿಗೆ (ರೋಟರಿ ಫಿಲ್ಟರ್) ಸ್ಕ್ರೂ ಪ್ರೆಸ್ ಮೂಲಕ ಹಾದು ಬಂದ ಅನಂತರ ಸಿಧ್ದ ಕಾಗದ ವಸ್ತುವಾಗುವುದು. ವಿಸರ್ಜಿತ ದ್ರಾವಣವನ್ನು ಕಾಸ್ಟಿಕ್ ಸೋಡಾದಿಂದ ತಟಸ್ಥಗೊಳಿಸಿ, ಶೋಧಿಸಿ, ಮಸಿಯಲ್ಲಿದ್ದ ವರ್ಣದ್ರವ್ಯವನ್ನೂ ಸಂಪಾದಿಸಬಹುದು. ಲೀಟರಿಗೆ ಸುಮಾರು 2 ಗ್ರಾಂಗಳಷ್ಟು ಗಂಧಕದ ಡೈಆಕ್ಸೈಡು ನಿರುಪಯೋಗಿಯಾಗಿ ಬಚ್ಚಲನ್ನು ಸೇರುವುದು ಅನಿವಾರ್ಯ ನಷ್ಟವೇ ಸರಿ.

ಪಲ್ಪಿನ ತಯಾರಿಕೆಗೆ ಹಳೆಯ ಕಾಗದದ ಬಳಕೆ ಮಹತ್ತ್ವದ ವಿಷಯ. ಕಾರಣಗಳಿವು: 1. ಹೇರಳವಾಗಿ ದೊರೆಯುತ್ತದೆ. 2. ಸಂಗ್ರಹ ಕಾರ್ಯದುಬಾರಿಯಲ್ಲ. 3. ಪಲ್ಪ್ ಮಾಡಲು ತಗಲುವ ವೆಚ್ಚ ಕಡಿಮೆ. 4. ಉತ್ತಮ ದರ್ಜೆಯ ಕಾಗದವನ್ನು ಮಾಡಬಹುದು. 5. ಕೇವಲ ಯಾಂತ್ರಿಕ ವಿಧಾನಗಳಿಂದ ಹಳೆಯ ವೃತ್ತಪತ್ರಿಕೆಗಳು, ಹೊದಿಕೆಯ ಕಾಗದ ಮತ್ತು ಪೆಟ್ಟಿಗೆ ರಟ್ಟನ್ನು ಪಲ್ಪ್ ಮಾಡಬಹುದು. 6. ಇಂಥ ಪಲ್ಪಿನಿಂದ ಆಲಂಕಾರಿಕ ಚಾವಣಿ ಮತ್ತು ಭಿತ್ತಿಕಾಗದವನ್ನು ರೂಪಿಸಬಹುದು. 7. ಈ ಕಾಗದ ಉತ್ಪನ್ನಗಳಿಗೇ ದಟ್ಟ ಬಣ್ಣಗಳಿರುವ ಪ್ರಯುಕ್ತ ಕಚ್ಚಾ ಕಾಗದದಿಂದ ಮಸಿ ಮತ್ತು ವರ್ಣದ್ರವ್ಯಗಳನ್ನು ನಿರ್ಮೂಲ ಮಾಡುವ ತೊಂದರೆ ತಪ್ಪುತ್ತದೆ.

ಕಾಗದದ ಕೈಗಾರಿಕೆಯ ವ್ಯುತ್ಪನ್ನಗಳು ವೈವಿಧ್ಯಮಯವಾಗಿವೆ. ಶತಮಾನಗಳ ಕಾಲ ತನ್ನ ಸಾಂಪ್ರದಾಯಿಕ ಉಪಯೋಗಗಳನ್ನೂ ವೈಶಿಷ್ಟವನ್ನೂ ಕಾಪಾಡಿಕೊಂಡು ಬಂದಿದ್ದ ಕಾಗದಕ್ಕೆ ಇಂದು ವಿನೂತನ ಉಪಯೋಗಗಳು ಹುಟ್ಟಿಕೊಂಡಿವೆ. ಅನಿವಾರ್ಯವಾಗಿ ತಯಾರಿಕಾ ತಂತ್ರಗಳೂ ಸುಧಾರಿತನಾಗಿವೆ. ನೂತನ ಕಾಗದದ ವ್ಯುತ್ಪನ್ನಗಳನ್ನು ರೂಪಿಸಲು ಅನುಸರಿಸುವ ಕ್ರಮಗಳಲ್ಲಿ ಕೆಲವನ್ನು ಮಾತ್ರ ಮುಂದೆ ಹೆಸರಿಸಲಾಗಿದೆ. ಉನ್ನತ ಉರುಳು ಯಂತ್ರಕ್ಕೆ ಒಡ್ಡುವುದು, ಮೇಣದ ಲೇಪನ, ನಿರಿಗೆಗಟ್ಟಸುವಿಕೆ ಬಹುಪದರ ಲಟ್ಟಣೆ, ಉಬ್ಬಚ್ಚು ಮಾಡುವುದು ಇತ್ಯಾದಿ. ಹಡಗುಗಳಲ್ಲಿ ಸರಕನ್ನು ಸಾಗಿಸುವುದಕ್ಕೆ ನೀರಿಗೆ ರಟ್ಟಿನ ಪೆಟ್ಟಿಗೆಗಳು ಬಲು ಅನುಕೂಲ. ಇದರ ಸಲುವಾಗಿಯೇ ಅನೇಕ ಮಿಲಿಯನ್ ಟನ್‍ಗಳಷ್ಟು ಕಾಗದ ವಿನಿಯೋಗವಾಗುತ್ತಿದೆ. ಕಾಳುಗಳು ಮತ್ತಿತರ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಗಟ್ಟಿಮುಟ್ಟಾದ ಕಾಗದದ ಚೀಲಗಳ ಅಗತ್ಯವುಂಟು. ಇಂಥ ಕಾಗದಕ್ಕೆ ಮೇಣದ ಲೇಪನವಿರುವುದರಿಂದ ಒದ್ದೆಯಾಗುವ ಸಂಭವವಿಲ್ಲ. ಅಗಾಧ ಪ್ರಮಾಣದ ಕಾಗದವು ಚೀಲಗಳ ತಯಾರಿಕೆಗೆ ಬಳಸಲ್ಪಡುತ್ತಿದೆ. ಸೋಸಣಿಗೆ ಪತ್ರಗಳ ತಯಾರಿಕೆಗೆ ಖರ್ಚಾಗುವ ಕಾಗದದ ಪ್ರಮಾಣ ಕಡಿಮೆಯೇನಲ್ಲ. ಕಾಗದಕ್ಕೆ ಹೊಸ ಉಪಯೋಗಗಳ ಶೋಧವಾದಂತೆ ಅದರ ತಯಾರಿಕೆಗೆ ಬಳಸುತ್ತಿದ್ದ ಸಾಂಪ್ರದಾಯಿಕ ಕಚ್ಚಾ ವಸ್ತುಗಳನ್ನು ಕೈಬಿಡುವ ಪ್ರಸಂಗ ಒದಗಿದೆ. ಗಾಜು ಮತ್ತು ಇತರ ಖನಿಜಮೂಲದ ಎಳೆಗಳು ಮತ್ತು ಸಂಯೋಜಿತ ಬಹ್ವಂಗೀಕೃತ ವಸ್ತುಗಳ ಬಗ್ಗೆ ಒಲವು ಹೆಚ್ಚುತ್ತಿದೆ. ಈ ವಿಶೇಷ ಕಚ್ಚಾವಸ್ತುಗಳಿಂದ ಕಾಗದ ತಯಾರಿಸಬೇಕೆಂದರೆ ಉತ್ಪಾದನೆಯ ವಿಧಾನಗಳಲ್ಲೂ ಮಾರ್ಪಾಡುಗಳು ಆಗಲೇಬೇಕು. ಕಾಗದದ ಕೈಗಾರಿಕೆ ವಿಕಾಸದ ಹೊಸ್ತಿಲಲ್ಲಿದೆ. ಪರ್ವಕಾಲದ ಮೂಲಕ ಹಾಯುತ್ತಿದೆ. ಅನತಿಕಾಲದಲ್ಲಿ ಅದರ ಚರ್ಯೆ ಮತ್ತು ವ್ಯಾಪ್ತಿಗಳು ಗುರುತು ಸಿಗದಷ್ಟು ಬದಲಾಯಿಸಿರಲು ಸಾಕು.

ಕಾಗದ ಕೇವಲ ಆಧುನಿಕ ಸೌಕರ್ಯವಲ್ಲ. ನಮ್ಮ ನಾಗರಿಕತೆಯ ಉಳಿವು ಅದರ ಮೇಲೆ ನಿಂತಿದೆ. ಪೀಳಿಗೆಯಿಂದ ಪೀಳಿಗೆಗೆ ಜ್ಞಾನವಹನ ಆಗಬೇಕಾದರೆ ಇಂದಿನವರು ಮುಂದಿನವರ ಸಲುವಾಗಿ ಅದನ್ನು ಕಾಗದದ ಮೇಲೆ ಮೂಡಿಸಿದರೆ ಮಾತ್ರ ಸಾಧ್ಯವಷ್ಟೆ.         (ಎಚ್.ಜಿ.ಎಸ್.; ಪಿ.ಎಸ್.ಎಚ್.)

ಕಾಗದದ ಉತ್ಪನ್ನಗಳು: ಲಕ್ಕೋಟೆಗಳು, ಪೊಟ್ಟಣಗಳು, ಪೆಟ್ಟಿಗೆಗಳು ಮುಂತಾದವು. ಇವುಗಳ ಬಳಕೆ 19ನೆಯ ಶತಮಾನದ ಉತ್ತರಾರ್ಧದಲ್ಲಿ ರೂಢಿಗೆ ಬಂತು. ಕೇವಲ ಬರೆಯುವ ಸಾಧನವಾಗಿದ್ದ ಕಾಗದದಿಂದ ಸುಮಾರು 1850ರಲ್ಲಿ, ಜನರು ಕೈಗಳಿಂದಲೇ ಕಾಗದದ ಪೊಟ್ಟಣಗಳನ್ನು ಮಾಡುವುದನ್ನು ಕಲಿತರು. ಅಲ್ಲಿಂದ ಈಚೆಗೆ ಇಪ್ಪತ್ತೈದು ವರ್ಷಗಳ ತರುವಾಯ ಪೊಟ್ಟಣಗಳನ್ನು ತಯಾರಿಸುವ ಸ್ವಯಂಚಾಲಿತ ಯಂತ್ರಗಳು ಅಸ್ತಿತ್ವಕ್ಕೆ ಬಂದುವು. 1903ರ ಹೊತ್ತಿಗೆ ಮರದ ಪೆಟ್ಟಿಗೆಗಳು ಮರೆಯಾಗಿ ಕಾಗದದ ಪೆಟ್ಟಿಗೆಗಳು ಬಳಕೆಗೆ ಬಂದುವು. ಮೂರು ವರ್ಷಗಳ ಅನಂತರ ಕಾಗದದ ರಟ್ಟಿನ ಪೆಟ್ಟಿಗೆಗಳು ಸಾಮಾನ್ಯವಾಯಿತು. ಕ್ರಮೇಣವಾಗಿ ಆಹಾರ ಪದಾರ್ಥಗಳನ್ನು ಅಮೆರಿಕದಲ್ಲಿ ಅದಕ್ಕೆಂದೇ ತಯಾರಿಸಿದ ಕಾಗದದಲ್ಲಿ ಸುತ್ತಿಡುತ್ತಿದ್ದರು. ಆಹಾರ ಪದಾರ್ಥಗಳೇ ಅಲ್ಲದೆ ಹಣ್ಣಗಳನ್ನೂ ಕಾಗದದಲ್ಲಿ ಸುತ್ತಿ ಹಡಗುಗಳಲ್ಲಿ ರಫ್ತುಮಾಡುವುದು ಸಾಪೇಕ್ಷವಾಗಿ ಅನುಕೂಲಕರವಾಗಿತ್ತು. ಇಂದು ಅಮೆರಿಕದ ಕೈಗಾರಿಕೆಗಳಲ್ಲಿ ಕಾಗದದ ಉತ್ಪನ್ನಗಳ ಕೈಗಾರಿಕೆ ಐದನೆಯದಾಗಿದೆ.

ಸಾಮಾನ್ಯವಾಗಿ ಪ್ಯಾಕಿಂಗಿಗಾಗಿ ಉಪಯೋಗಿಸುವ ಕಾಗದಗಳಲ್ಲಿ ಗ್ಲಾಸ್ಸೈನ್, ಕ್ರಾಫ್ಟ್, ಚರ್ಮಕಾಗದ (ಪಾರ್ಚ್‍ಮೆಂಟ್), ಮೇಣಲೇಪಿತ ಕಾಗದ, ಟಿಷ್ಯೂ ಕಾಗದ ಇತ್ಯಾದಿಗಳು ಮುಖ್ಯವಾದವು. ಭಿನ್ನ ಭಿನ್ನ ಅಂಶಗಳಲ್ಲಿ ವಿವಿಧ ಘಟಕಗಳ ಸಂಯೋಜನೆ, ವಿವಿಧ ರಾಸಾಯನಿಕ ವಸ್ತುಗಳ ಲೇಪನಗಳಿಂದ ಪ್ಯಾಕಿಂಗ್ ಕಾಗದಗಳಲ್ಲಿ ಬಹುಸಂಖ್ಯಾತ ವಿಧಗಳಾಗಿವೆ. ಇವುಗಳಲ್ಲಿ ಕ್ರಾಫ್ಟ್ ಕಾಗದವನ್ನು ಒಂದಲ್ಲ ಒಂದು ವಿಧದಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ. ತೆಳುಹಾಳೆಗಳಿಂದ ಸಂಘಟಿತವಾದ ಕಾಗದದ ಡಬ್ಬಿಗಳಲ್ಲಿ ಬಹಳಷ್ಟುಮಟ್ಟಿಗೆ ಕ್ರಾಫ್ಟ್ ಕಾಗದದ ಒಂದು ವಿಧವನ್ನು ಉಪಯೋಗಿಸಲಾಗುತ್ತದೆ. ಕಾಗದದ ಉತ್ಪನ್ನಗಳ ತೂಕ ಬಲು ಕಡಿಮೆಯಾಗಿರುವುದರಿಂದ ಯಂತ್ರಗಳ ಎಣ್ಣೆಯ ಮಾರುಕಟ್ಟೆಯಲ್ಲಂತೂ ಲೋಹದ ಡಬ್ಬಗಳ ಜಾಗದಲ್ಲಿ ತೆಳುಹಾಳೆಯ ಕಾಗದದ ಡಬ್ಬಿಗಳು ಪ್ರಯೋಜನಕಾರಿಯಾಗಿಯೂ ಲಾಭದಾಯಕವಾಗಿಯೂ ಇವೆ. ಕಾಗದದ ಉತ್ಪನ್ನಗಳ ಈ ರೀತಿಯಾದ ಅತಿ ಹೆಚ್ಚಿನ ಬಳಕೆಗೆ ಅನೇಕ ಕಾರಣಗಳಿವೆ. ಈ ಉತ್ಪನ್ನಗಳಲ್ಲಿ ಖರ್ಚು ಸಾಪೇಕ್ಷವಾಗಿ ಬಹಳ ಕಡಿಮೆ ಮತ್ತು ಇವುಗಳ ಉಪಯೋಗಗಳು ವಿವಿಧವಾದವು. ಕಾಗದದ ಆದ್ರ್ರ ಸಾಮಥ್ರ್ಯ (ವೆಟ್ ಸ್ಟ್ರೆಂತ್) ಬಹಳವಾಗಿರುವುದರಿಂದ ಅದನ್ನು ಯಾವ ಆಕಾರಕ್ಕೆ ಬೇಕಾದರೂ ಮಾರ್ಪಡಿಸಬಹುದು. ಸೂಕ್ತ ರಾಸಾಯನಿಕ ವಿಧಾನಗಳಿಂದ ಈ ಉತ್ಪನ್ನಗಳನ್ನು ತಯಾರಿಸಿದಲ್ಲಿ ಅವು ಬೇಗ ಮಡಿಚಿಹೋಗುವುದಿಲ್ಲ. ಹೀಗೆ ತಯಾರಿಸಲಾದ ಪ್ಯಾಕಿಂಗ್ ಉತ್ಪನ್ನಗಳ ಮೇಲೆ ನೀರಿನ ಆವಿ, ಎಣ್ಣೆ, ಕೊಬ್ಬು ಮತ್ತು ಕಿಲುಬುಗಳ ಪ್ರಭಾವ ಬೀಳಲಾರದು; ಬೆಂಕಿಯ ಉರಿಯಿಂದ ಮಾಸಲಾಗದಂತೆ, ಹುಳಹುಪ್ಪಟೆಗಳಿಗೆ ತುತ್ತಾಗದಂತೆ ಅವನ್ನು ತಯಾರಿಸಬಹುದು. ಬಣ್ಣ, ರುಚಿಗಳಲ್ಲದಿರುವುದರಿಂದಲೂ ವಿಷರಹಿತವಾಗಿರುವುದರಿಂದಲೂ ಕಾಗದದ ಉತ್ಪನ್ನಗಳನ್ನು ಆಹಾರಪದಾರ್ಥ ಶೇಖರಿಸಲು ನಿರ್ಭಯವಾಗಿ ಉಪಯೋಗಿಸಬಹುದು.

ಕಾಗದಕ್ಕೆ ಕೆಲವು ರಾಸಾಯನಿಕ ವಸ್ತುಗಳನ್ನು ಲೇಪಿಸುವುದರ ಮೂಲಕ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಕಾಗದದ ಲೋಟಗಳು, ರಟ್ಟಿನ ಪೆಟ್ಟಿಗೆಗಳು, ಸುತ್ತುವ ಕಾಗದ ಹಾಗೂ ಇನ್ನಿತರ ಉತ್ಪನ್ನಗಳ ಮೇಲೆ ಪ್ಯಾರಾಫಿನ್ ಹಾಗೂ ಮೇಣಗಳ ಲೇಪನದಿಂದ ಅವನ್ನು ಗಟ್ಟಿಯಾಗಿಯೂ ಅಂಟಿಕೊಳ್ಳದಿರುವಂತೆಯೂ ಮಾಡುವುದು ಸಾಧ್ಯ. ಅವುಗಳಿಗೆ ಯಥೇಚ್ಛವಾಗಿ ಹೊಳಪು ಕೊಡಬಹುದು. ಅತಿ ಸೂಕ್ಷ್ಮವಾದ ಸ್ಫಟಿಕಾಕಾರದಲ್ಲಿರುವ ಪ್ಯಾರಾಫಿನ್ ಮೇಣ ಹಾಗೂ ಸಾಧಾರಣ ಮೇಣಗಳಿಂದ ಲೇಪಿಸಿದ ಕಾಗದದಲ್ಲಿ ಎಣ್ಣೆ ಮತ್ತು ನೀರಿನ ಆವಿಗಳಿಗೆ ಪ್ರಬಲವಾದ ರೋಧಕತ್ವವೂ ಉಷ್ಣಸಂಚಯನ ಸಾಮಥ್ರ್ಯವೂ ಅಧಿಕವಾಗುತ್ತವೆಂದು ತಿಳಿದುಬಂದಿದೆ. ಆದ್ದರಿಂದ ಬೆಣ್ಣೆ, ಮಾಂಸ, ತಿಂಡಿಗಳು ಹಾಗೂ ಕೊಬ್ಬಿನ ಪದಾರ್ಥಗಳನ್ನು ಶೇಖರಿಸಿಡಲು ಕಾಗದದ ಇಂಥ ಉತ್ಪನ್ನಗಳು ಬಹಳವಾಗಿ ಬಳಕೆಯಲ್ಲಿವೆ. ಕೆಲವು ರೀತಿಯ ಕಾಗದಗಳ ಮೇಲೆ ನೈಟ್ರೋಸೆಲ್ಯುಲೋಸ್, ಈಥೈಲ್ ಸೆಲ್ಯುಲೋಸ್, ಪಾಲಿಎಥಿಲೀನ್, ಪಾಲಿವಿನಿಲುಗಳಂಥ ವಸ್ತುಗಳನ್ನು ಲೇಪಿಸುತ್ತಾರೆ. ವಿಲೇಯಕಗಳು ಒಂದು ರೀತಿಯ ತೆಳುವಾದ ಪದರವನ್ನು ಕಾಗದದ ಮೇಲೆ ರಚಿಸುತ್ತವೆ. ಈ ರೀತಿಯ ಹೊಳಪಿನ ಕಾಗದಗಳನ್ನು ಅಲಂಕಾರ ಸಾಮಗ್ರಿಯಾಗಿಯೂ ಬಣ್ಣ ಬಣ್ಣ ಪುಸ್ತಕಗಳ ರಟ್ಟಾಗಿಯೂ ಆಹಾರ ಪದಾರ್ಥಗಳನ್ನು ಸುತ್ತುವ ಸಾಧನವಾಗಿಯೂ ಉಪಯೋಗಿಸುತ್ತಾರೆ. ಲೇಪನಸಾಮಗ್ರಿಗಳಿಗೆ ಅನುಗುಣವಾಗಿ ಅವುಗಳಲ್ಲಿ ಜಲರೋಧಕತ್ವ, ಉಷ್ಣಸಂಚಯನ ಸಾಮಥ್ರ್ಯ, ಕ್ಷಾರ ನಿರೋಧಕತ್ವ ಇತ್ಯಾದಿಗಳನ್ನು ನಮೂದಿಸಬೇಕು.

ಪಾಲಿಎಥಿಲೀನ್ ಮುಂತಾದ ಪ್ಲಾಸ್ಟಿಕ್ ರೆಸಿನ್ನುಗಳನ್ನು (ಶಿಲಾರಾಳ) ಲೇಪಿಸಿದ ಕಾಗದಗಳಲ್ಲಿ ಅನೇಕ ವಿಶೇಷ ಗುಣಗಳಿವೆ. ಅವು ಬೇಗ ಹರಿಯಲಾರವು. ತೂತು ಬೀಳಲಾರವು, ಅಲ್ಲದೆ ಅವು ಬಹಳ ನುಣಪಾಗಿಯೂ ನೋಡಲು ಆಕರ್ಷಕವಾಗಿಯೂ ಇರುತ್ತವೆ. ಉಷ್ಣ, ತೇವ, ಅನಿಲಗಳು ಹಾಗೂ ಕೊಬ್ಬಿನಿಂದಾಗುವ ಪರಿಣಾಮಗಳನ್ನು ಅವು ತಡೆಗಟ್ಟಬಲ್ಲವು. ಕಾಗದದ ಬೋರ್ಡುಗಳಲ್ಲಿ ಗಡುಸುತನ ಅಧಿಕವಾಗಿದ್ದು. ಅವುಗಳ ಮೇಲೆ ಅಂಟಿಸಿದ ಕಾಗದಗಳ ಮೇಲೆ ಅತ್ಯುತ್ತಮವಾಗಿ ಮುದ್ರಿಸಲು ಸಾಧ್ಯವಿದೆ. ಲೇಪನದಲ್ಲಿ ಉತ್ಪನ್ನಕ್ಕೆ ಅನುಸಾರವಾದ ಗಾಢತೆ ಇರಬೇಕು. ಕಾಗದದ ಮೇಲ್ಭಾದಲ್ಲಿ ಪ್ಲಾಸ್ಟಿಕಿನ ಲೇಪನವಿದ್ದಲ್ಲಿ ಮುದ್ರಿಸಲು ಇನ್ನೂ ಉತ್ತಮ. ಅನೇಕ ವೇಳೆ ಮರವಜ್ರದಂತೆ ಅಂಟುವ ಪಾಲಿಎಥಿಲೀನಿನ ಲೇಪನವನ್ನೂ ಮಾಡುವುದುಂಟು. ಕ್ಷೀರರೂಪದಲ್ಲಿರುವ ಪಾಲಿಕಿನಿಲಿಡೈನ್ ಲೇಪನದಿಂದ ಕಾಗದದ ಉತ್ಪನ್ನಗಳಿಗೆ ನೀರಿನ ಆವಿ, ಅನಿಲಗಳು ಹಾಗೂ ಕೊಬ್ಬಿಗೆ ಉತ್ತಮವಾದ ರೋಧಕತ್ತ್ವ ಸಾಮಥ್ರ್ಯ ಉಂಟಾಗುವುದು.

ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಹತ್ತಿ ಹಾಗೂ ಉಣ್ಣೆಯ ಬಟ್ಟೆಗಳ ಅಭಾವವಿದ್ದ ಕೆಲವು ದೇಶಗಳಲ್ಲಿ ಕಾಗದದ ವಸ್ತುಗಳು ಕೈಗಾರಿಕೆ ತೀವ್ರವಾಗಿ ಪ್ರಾರಂಭವಾಯಿತು. ಈ ಸಮಯದಲ್ಲೇ ಇಂಗ್ಲೇಡ್ ಫ್ರಾನ್ಸ್ ಮೊದಲಾದ ದೇಶಗಳಲ್ಲಿ ವಿಲ್ಟನ್ ಜಮಖಾನಗಳನ್ನು ತಯಾರಿಸಲು ಕಾಗದದ ಎಳೆಗಳನ್ನು ಉಪಯೋಗಿಸಲಾಯಿತು. ಸಂಯುಕ್ತಸಂಸ್ಥಾನಗಳಲ್ಲಂತೂ ಅನೇಕ ವರ್ಷಗಳಿಂದ ಕಾಗದದ ಎಳೆಗಳನ್ನು ಪೀಠೋಪಕರಣಗಳನ್ನು ತಯಾರಿಸಲು ಸಹ ಉಪಯೋಗಿಸುತ್ತಿದ್ದಾರೆ. ಕಾಗದದ ಎಳೆಗಳಿಗೆ ರಾಸಾಯನಿಕವಾಗಿ ಬಣ್ಣಗಳನ್ನು ಮಿಶ್ರಮಾಡಲು ಸಾಧ್ಯವಿರುವುದರಿಂದ ಯಾವುದೇ ಅಪೇಕ್ಷಿತ ಬಣ್ಣದ ಕಾಗದದ ವಸ್ತ್ರಗಳನ್ನು ತಯಾರಿಸಬಹುದು.

 ವಿದ್ಯುಚ್ಛಕ್ತಿಯ ಪ್ರಪಂಚದಲ್ಲಿ ಕಾಗದ ಉತ್ಪನ್ನಗಳನ್ನು ತಂತಿಗಳನ್ನು ಮೆತ್ತಲು ಬಳಸಲಾಗುತ್ತಿದೆ. ಕಾಗದದಿಂದ ಉತ್ಪನ್ನವಾದ ಬಾಂಡ್-ವೆಬ್ ಎಂಬ ಬಟ್ಟೆಗಳು ಅನೇಕ ಮಾದರಿಗಳಲ್ಲಿ ದೊರೆಯುತ್ತವೆ. ಇವನ್ನು ಕತ್ತರಿಸುವುದೂ ಬಹಳ ಸುಲಭ. ಇವುಗಳಲ್ಲಿ ಕೆಲವನ್ನು ಬಟ್ಟೆಗಳಿಗೆ ಅಂಚುಕಟ್ಟಲು, ಕಾಲರ್ ಅಥವಾ ಕಫ್‍ಗಳನರ, ಪುರುಷರ ಉಡುಪುಗಳಿಗಾಗಿ ತಯಾರಿಸಲು ಅಥವಾ ಸ್ಕರ್ಟ್ ಮುಂತಾದ ಸ್ತ್ರೀಯರ ಉಡುಪುಗಳಿಗೆ ಅಂಚನ್ನು ಮಾಡಲು ಉಪಯೋಗಿಸುತ್ತಾರೆ. ಬಾಂಡ್-ವೆಬ್ ಉತ್ಪನ್ನಗಳು ಬಹಳ ಕಾಲ ಬಾಳುವುದರಿಂದ ಅವನ್ನು ನೆಲಗಂಬಳಿ, ಟವಲುಗಳು ಮುಂತಾದವುಗಳನ್ನು ತಯಾರಿಸಲು ಬಳಸುವುದುಂಟು.   

(ಎಸ್.ಎಲ್.ಎ.)

ಭಾರತದಲ್ಲಿ ಕಾಗದದ ಕೈಗಾರಿಕೆ: ಕ್ರಿ.ಶ. 150ರ ಸುಮಾರಿಗೆ ಚೀನಿಯರು ಮೊಟ್ಟಮೊದಲಿಗೆ ಕಾಗದವನ್ನು ತಯಾರಿಸಿದರೆಂದು ಎಲ್ಲರೂ ಒಪ್ಪುತ್ತಾರೆ. ಚೀನೀ ಯಾತ್ರಿಕ ಇತ್ಸಿಂಗ್ ಭಾರತೀಯ ಕಾಗದದ ಬಗೆಗೆ ಉಲ್ಲೇಖಿಸಿರುವನಾದರೂ ಅದು ಅಷ್ಟೊಂದು ಜನಪ್ರಿಯ ಬರೆವಣಿಗೆಯ ಸಾಮಗ್ರಿಯಾಗಿರಲಿಲ್ಲವೆಂದು ತೋರುತ್ತದೆ. ತಾಳೆಗರಿ ಮತ್ತು ಭೂರ್ಜಪತ್ರದ ಮೇಲೆ ಬರೆಯುವುದು ಹೆಚ್ಚು ಪ್ರಚಲಿತವಾಗಿದ್ದರೂ ಕ್ರಿ.ಶ. ಎಂಟನೆಯ ಶತಮಾನದ ಸಂಸ್ಕøತ-ಚೀನೀ ಕೋಶವೊಂದರಲ್ಲಿ ತ್ಸೀ (ಕಾಗದ) ಎಂಬ ಚೀನೀ ಪದದ ಶಯ ಎಂಬ ಸಂಸ್ಕøತರೂಪ ಕಾಣಬರುತ್ತದೆ. ಇದೇ ಕೋಶದಲ್ಲಿ ಕಾಫ್‍ಜ್ ಎಂಬ ಪದದ ಸಂಸ್ಕøತ ಕಕಲಿ ಅಥವಾ ಕಕರಿ ಎಂಬ ರೂಪಗಳೂ ಸಿಗುತ್ತವೆ.

ಗುಜರಾತಿನಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಕಾಗದದ ಹಸ್ತಪ್ರತಿ 1223-24ರಲ್ಲಿ ಬರೆದುದ್ದು. ಕಾಗದದ ಮೇಲೆ ಬರೆದ ಶತಪಥ ಬ್ರಾಹ್ಮಣದ ಕಾಶ್ಮೀರದ ಹಸ್ತಪ್ರತಿಯೊಂದು 1089ರಲ್ಲಿ ರಚಿತವಾದದ್ದೆಂದು ಎಂ. ಎ. ಸ್ಟೇನ್ ಉಲ್ಲೇಖಿಸಿದ್ದಾನೆ. ಜಿಪ್ಸಂ ಖನಿಜ ಬಳಿದಿದ್ದ ಕೆಲವು  ಕಾಗದದ ಹಸ್ತಪ್ರತಿಗಳಲ್ಲಿ 5ನೆಯ ಶತಮಾನದ ಅಥವಾ ಇನ್ನೂ ಸ್ವಲ್ಪ ಪ್ರಾಚೀನವಾಗಿರಬಹುದಾದ ಉತ್ತರ ಭಾರತದ ಲಿಪಿಗಳಿವೆ. ಇವು ಮಧ್ಯ ಏಷ್ಯದ ಯಾರ್ ಖಂಡ್ ಎಂಬಲ್ಲಿ ದೊರೆತಿವೆ. ಆದರೆ ಇವು ಭಾರತದ ಹೊರಗಡೆಯೇ ಬರೆದಂಥವುಗಳಿರಬೇಕು.

ಮೇಲಿನ ಎರಡು ಪರಿಚ್ಛೇದಗಳನ್ನು ಡಿ.ಸಿ. ಸರ್ಕಾರರ ಇಂಡಿಯನ್ ಎಪಗ್ರಫಿ ಎಂಬ ಗ್ರಂಥದಿಂದ ಉದ್ದರಿಸಲಾಗಿದೆ.

ಕಾಗದ ತಯಾರಿಸುವ ಕಲೆ ಭಾರತದಲ್ಲಿ ತಡವಾಗಿಯೇ ಪ್ರಾರಂಭವಾಯಿತೆನ್ನಬಹುದು. ಯಂತ್ರಗಳಿಂದ ಕಾಗದದ ಉತ್ಪಾದನೆ ಮೊಟ್ಟಮೊದಲ ಬಾರಿ 1870ರಲ್ಲಿ ಪ್ರಾರಂಭವಾಯಿತೆನ್ನಲು ದಾಖಲೆಗಳಿವೆ. ಕಲ್ಕತ್ತದಲ್ಲಿ ಪ್ರಾರಂಭವಾದ ಬ್ಯಾಲಿ ಮಿಲ್ಸ್ ಈ ಉದ್ಯಮಕ್ಕೆ ಅಸ್ತಿಭಾರ ಹಾಕಿತು. ಆದರೆ ಮೊಟ್ಟಮೊದಲ ಸಫಲ ಯತ್ನವಾದುದ್ದು 1881ರಲ್ಲಿ -ಬಂಗಾಳದಲ್ಲಿ; ಟಿಟಾಘರ್ ಪೇಪರ್ ಮಿಲ್ಸಿನ ಉದ್ಘಾಟನೆಯಿಂದ. ಅನಂತರ ಈ ಕೈಗಾರಿಕೆ ದೇಶದ ಹಲವಡೆ ಬೆಳೆಯಿತು. 1925ರಲ್ಲಿ ಕೈಗಾರಿಕೆ ಸಂರಕ್ಷಣ ಕರದ (ಫ್ರೊಟೆಕ್ಟಿವ್ ಟ್ಯಾರಿಫ್) ಆಶ್ರಯ ಪಡೆಯಿತು. 1945ರಲ್ಲಿ ಈ ಸುಂಕವನ್ನು ರೆವಿನ್ಯೂ ಕರವನ್ನಾಗಿ ಮಾರ್ಪಡಿಸಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶದ ಕಾರ್ಖಾನೆಗಳ ಸಂಖ್ಯೆ 15ಕ್ಕೆ ಏರಿತು. ಉತ್ಪಾದನೆ 1,03,884 ಟನ್ನುಗಳಷ್ಟಾಯಿತು. ದೇಶ ಸ್ವಾತಂತ್ರ ಗಳಿಸಿದ ಅನಂತರ, ಮುಖ್ಯವಾಗಿ ಯೋಜನೆಗಳು ಪ್ರಾರಂಭವಾದ ಮೇಲೆ ನಮ್ಮ ಪ್ರಗತಿಯಲ್ಲಿ ವೇಗ ಕಂಡುಬಂದಿದೆ.ಈ ಕೆಳಗಿನ ಅಂಕಿಗಳಿಂದ ಗುರುತಿಸಬಹುದು. 

ವರ್ಷ

ಸಾಮಥ್ರ್ಯ

ಉತ್ಪಾದನೆ

ಉತ್ಪಾದನೆ

    ಸಾವಿg ಟನ್ನುಗಳು

ಸಾಮಥ್ರ್ಯz ಸೇPq

1951-52

137.0

132.0

96.0

1960-61

418.0

350.0

84.0

1965-66

680.0

550.0

82.0

1966-67

711.0

580.0

81.0

1967-68

730.0

620.0

85.0

1968-69

750.0

640.0

85.0

 

ಪ್ರಥಮ ಪಂಚವಾರ್ಷಿಕ ಯೋಜನೆ ಪ್ರಾರಂಭವಾದಾಗ ಭಾರತ ದೇಶದಲ್ಲಿ 17 ಕಾಗದದ ಕಾರ್ಖಾನೆಗಳಿದ್ದವು. ಆ ಯೋಜನೆಯ ಅವಧಿಯಲ್ಲಿ ಮೂರು ಹೊಸ ಕಾರ್ಖಾನೆಗಳು ಸ್ಥಾಪಿತವಾದುವು. ಅಲ್ಲದೆ 14 ಕಾರ್ಖಾನೆಗಳ ನವೀಕರಣ ಕಾರ್ಯ ನಡೆಯಿತು. ಎರಡನೆಯ ಯೋಜನೆಯ ಅವಧಿಯಲ್ಲಿ 8 ಹೊಸ ಸಂಸ್ಥೆಗಳು ಉತ್ಪಾದನೆ ಆರಂಭಿಸಿದುವು. ಹಲವು ಹಳೆಯ ಕಾರ್ಖಾನೆಗಳು ವಿಸ್ತøತವಾದುವು. ಅಭಿವೃದ್ದಿಗೊಂಡುವು. ಮೂರನೆಯ ಯೋಜನೆಯ ಅವಧಿಯಲ್ಲಿ ಸ್ವಪರಿ ಪೂರ್ಣತೆಯ- ಎಂದರೆ 720 ಸಾವಿರ ಟನ್ನು ಕಾಗದ ಉತ್ಪಾದಿಸುವ-ಗುರಿ ಇತ್ತು. ಅಲ್ಲದೆ ಸಾಮಥ್ರ್ಯವನ್ನು 8,33,000 ಟನ್ನುಗಳಿಗೆ ಏರಿಸುವ ಗುರಿಯೂ ಇತ್ತು. ಆದರೆ ಮೂರನೆಯ ಯೋಜನೆಯಲ್ಲಿ ಈ ಗುರಿಯನ್ನು ಸಾಧಿಸಲಾಗಲಿಲ್ಲ.

ಯೋಜನೆಗಳು ಪ್ರಾರಂಭವಾದ ಅನಂತರ ಈವರೆಗೆ ದೇಶದ ಸಾಮಥ್ರ್ಯದಲ್ಲಿ 51/2 ಪಟ್ಟು ಹೆಚ್ಚಳವಾಗಿದೆ. ಉತ್ಪಾದನೆಯಲ್ಲಿಯೂ ಸುಮಾರು 5 ಪಟ್ಟು ಹೆಚ್ಚಳವಾಗಿದೆ. ಆದರೆ ಕೈಗಾರಿಕೆಯ ಸ್ಥಾಪಿತ ಸಾಮಥ್ರ್ಯವನ್ನು (ಇನ್‍ಸ್ಟಾಲ್ಡ್ ಕೆಪ್ಯಾಸಿಟಿ) ಪೂರ್ಣ ಬಳಸಿಕೊಳ್ಳಲಾಗುತ್ತಿಲ್ಲ. ಬಳಕೆಗೆ ಬಂದಿರುವುದು 1951-52ರಲ್ಲಿ ಸ್ಥಾಪಿತ ಸಾಮಥ್ರ್ಯದ 96% ರಷ್ಟು ಮಾತ್ರ.

ಈಗ (1971) ಭಾರತದಲ್ಲಿ 57 ಕಾಗದ ಕಾರ್ಖಾನೆಗಳಿವೆ. ಒಂದನ್ನುಳಿದು ಎಲ್ಲವೂ ಖಾಸಗೀ ಕ್ಷೇತ್ರದಲ್ಲಿವೆ. ಒಂದು ಪತ್ರಿಕಾಕಾಗದ (ನ್ಯೂಸ್ ಪ್ರಿಂಟ್) ಕಾರ್ಖಾನೆ ಮಾತ್ರ ಸರ್ಕಾರಿ ಕ್ಷೇತ್ರದಲ್ಲಿದೆ. ಕೇವಲ ಹತ್ತು ಕಾರ್ಖಾನೆಗಳು ತಲಾ 30,000 ಟನ್ನುಗಳಿಗಿಂತಲೂ ಹೆಚ್ಚು ವಾರ್ಷಿಕ ಉತ್ಪಾದನಾ ಸಾಮಥ್ರ್ಯ ಹೊಂದಿವೆ. ಟಿಟಾಘರ್ ಪೇಪರ್ ಮಿಲ್ಸ್ (ಪ.ಬಂಗಾಲ), ರೋಹತಾಸ್ ಇಂಡಸ್ಟ್ರಿಸ್(ಬಿಹಾರ), ಓರಿಯೆಂಟ್ ಪೇಪರ್ ಮಿಲ್ಸ್ (ಒರಿಸ್ಸ, ಮ. ಪ್ರದೇಶ), ಶ್ರೀ ಗೋಪಾಲ ಮಿಲ್ಸ್ (ಹರಿಯಾನ), ಬೆಲ್ಲಾರಪುರದ ಪೇಪರ್ ಅಂಡ್ ಸ್ಟ್ರಾ ಬೋರ್ಡ್ ಮಿಲ್ಸ್ (ಮಹಾರಾಷ್ಟ್ರ), ಸಿರಪುರ ಪೇಪರ್ ಮಿಲ್ಸ್ (ಆಂಧ್ರಪ್ರದೇಶ), ವೆಸ್ಟ್‍ಕೋಸ್ಟ್ ಪೇಪರ್ ಮಿಲ್ಸ್ (ಮೈಸೂರು) ಈ ಕಾರ್ಖಾನೆಗಳನ್ನು ದೇಶದ ದೊಡ್ಡ ಕಾಗದ ಕಾರ್ಖಾನೆಗಳೆಂದು ಹೆಸರಿಸಬಹುದು.

ಕಾರ್ಖಾನೆಗಳ ಗಾತ್ರ: ಅಮೆರಿಕ ಮತ್ತು ಸ್ಕಾಂಡಿನೇವಿಯನ್ ದೇಶಗಳಲ್ಲಿ ಪ್ರತಿದಿನ 500 ರಿಂದ 1,000 ಟನ್ ಕಾಗದ ಉತ್ಪಾದಿಸುವ ಕಾರ್ಖಾನೆಗಳಿವೆ. ಆದರೆ ಜಪಾನ್, ಬ್ರಿಟನ್ ಮತ್ತು ಇತರ ದೇಶಗಳಲ್ಲಿರುವಂತೆ ಭಾರತ ದೇಶದಲ್ಲಿಯೂ ಸಣ್ಣ ಪ್ರಮಾಣದ ಕಾಗದ ಉದ್ಯಮಗಳಿಗೇ ಉತ್ತೇಜನ ದೊರಕಿದೆ. ಏಕೆಂದರೆ ಇಂಥವುಗಳಿಗೆ ಹೆಚ್ಚಿನ ಬಂಡಾವಾಳ ಹಾಗೂ ತಾಂತ್ರಿಕ ಪ್ರಾವೀಣ್ಯದ ಆವಶ್ಯಕತೆ ಇರುವುದಿಲ್ಲ. ಸ್ಥಾನಿಕ ಕಚ್ಚಾ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಸ್ಥಳೀಯ ಮಾರುಕಟ್ಟೆಗಳಿಗಾಗಿ ಕಾಗದ ಉತ್ಪಾದಿಸಬಹುದು. ಆದರೆ ಇಂಥ ಕಾರ್ಖಾನೆಗಳಿಂದ ದೊಡ್ಡ ಕೈಗಾರಿಕೆಗಳ ಮಿತವ್ಯಯಗಳು ಸಾಧ್ಯವಿಲ್ಲ.

ರಾಜ್ಯಾನುಗುಣ ವಿಂಗಡಣೆ: ಈ ಕೈಗಾರಿಕೆ ಮೊದಲು ಬಂಗಾಳ ರಾಜ್ಯದಲ್ಲಿ ಕೆಂದ್ರೀಕೃತವಾಗಿತ್ತು. ಆದರೆ ಈಗ ಹೊಸ ಕಚ್ಚಾಸಾಮಗ್ರಿಗಳ ಬಳಕೆ, ಕೈಗಾರಿಕೆಗಳ ವಿಕೇಂದ್ರಿಕರಣ ನೀತಿ ಮತ್ತು ವಿದ್ಯುಚ್ಛಕ್ತಿಯ ಬಳಕೆಯಿಂದಾಗಿ ಎಲ್ಲ ರಾಜ್ಯಗಳಲ್ಲಿಯೂ ಹಂಚಿದೆ. ಆದಾಗ್ಯೂ ಬಂಗಾಳ, ಬಿಹಾರ, ಒರಿಸ್ಸ, ಮಹಾರಾಷ್ಟ್ರಗಳು ಪ್ರಮುಖ ಉತ್ಪಾದಕ ರಾಜ್ಯಗಳು. ಬಂಗಾಳ, ಬಿಹಾರ, ಒರಿಸ್ಸಗಳ ಪ್ರಾಮುಖ್ಯ 1961-69ರಲ್ಲಿ ಕಡಿಮೆಯಾದರೆ ಮಹಾರಾಷ್ಟ್ರ, ಮಧ್ಯಪ್ರದೇಶಗಳು ಗಣನೀಯ ಪ್ರಗತಿ ಸಾಧಿಸಿವೆ. 1961-69ರಲ್ಲಿ ವಿವಿಧ ರಾಜ್ಯಗಳಿದ್ದ ಕಾರ್ಖಾನೆಗಳ ಸಂಖ್ಯೆ ಮತ್ತು ಒಟ್ಟು ಸ್ಥಾಪಿತ ಸಾಮಥ್ರ್ಯ ಸೇಕಡಾ ಪ್ರಮಾಣಗಳನ್ನು ಮುಂದೆ ಕೊಟ್ಟಿದೆ.

 

gಜಗಳು

Pರ್ಖಾನೆಗಳ ಸಂಖ್ಯೆ

ಸ್ಥಾಪಿತ ಸಾಮಥ್ರ್ಯದ ಸೇಕಡ ಪ್ರಮಾಣ

1961

1969

ಪ.ಬಂಗಾಲ

9

23.3

18.6

ಒರಿಸ್ಸ

3

17.6

15.6

ಬಿಹಾg

2

14.7

9.6

ಮಧ್ಯಪ್ರದೇಶ

3

1.3

8.7

ಹರಿಯಾನ

4

-

7.0

ಉತ್ತರಪ್ರದೇಶ

2

6.5

5.2

ಮಹಾರಾಷ್ಟ್ರ

14

7.3

11.1

ಗುಜರಾv

6

1.5

2.8

ಮೈಸೂರು

5

8.9

8.6

ಆಂಧ್ರಪ್ರದೇಶ

2

9.5

6.6

ತಮಿಳುನಾಡು

3

-

4.0

ಕೇರಳ

2

2.1

2.2

ಸಂಘಟನೆ: ಕೈಗಾರಿಕೆಯ ಆಡಳಿತ ವ್ಯವಸ್ಥೆಗೋಸ್ಕರ ಎರಡನೆಯ ಯೋಜನೆಯ ಕೊನೆಯ ವರೆಗೂ ಈ ಕೈಗಾರಿಕೆಯನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು : 1. ಕಾಗದ ಹಾಗೂ ಕಾಗದದ ರಟ್ಟು, 2. ಹುಲ್ಲಿನ ಮತ್ತು ಇತರ ಬಗೆಯ ರಟ್ಟುಗಳು (ಸ್ಟ್ರಾ ಅಂಡ್ ಅದರ್ ಬೋರ್ಡ್), 3. ಪತ್ರಿಕಾ ಕಾಗದ. ಇವುಗಳ ಜೊತೆಗೆ ಈಗ ಸೆಕ್ಯೂರಿಟಿ ಕಾಗದ ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ.

ಮೊದಲನೆಯ ವಿಭಾಗದಲ್ಲಿ ಬರೆಯುವ ಅಚ್ಚುಮಾಡುವ ಸುತ್ತುವ ಕಾಗದಗಳು, ಕಾಗದದ ರಟ್ಟು ಹಾಗೂ ವಿಶೇಷ ಕಾಗದಗಳ ಉತ್ಪಾದನೆಗಳು ಸಮಾವೇಶವಾಗುತ್ತವೆ. 1967ರಲ್ಲಿ ಇವುಗಳ ಒಟ್ಟು ಉತ್ಪಾದನೆ 6,19,000 ಟನ್ನುಗಳು. ಸ್ಟ್ರಾಬೋರ್ಡುಗಳ ಉತ್ಪಾದನೆ 1,11,000 ಟನ್ನುಗಳು.

ಪತ್ರಿಕಾ ಕಾಗದದ ಉತ್ಪಾದನೆ ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಸಾಧ್ಯವಾಗಲಿಲ್ಲ. ಮಧ್ಯಪ್ರದೇಶದ ನೀಪಾ ನಗರದ ಕಾರ್ಖಾನೆ ಕಾರಣಾಂತರಗಳಿಂದ 1955ರ ಅನಂತರ ಉತ್ಪಾದನೆ ಪ್ರಾರಂಭಿಸಿತು. ಇಡೀ ದೇಶದಲ್ಲಿ ಪತ್ರಿಕಾ ಕಾಗದ ಕಾರ್ಖಾನೆಯೆಂದರೇ ಇದೊಂದೇ. ಇದರ ವಾರ್ಷಿಕ ಉತ್ಪಾದನಸಾಮಥ್ರ್ಯ 31 ಸಾವಿರ ಟನ್ನುಗಳು. ಆದರೆ ದೇಶದ ನಿಜವಾದ ಆವಶ್ಯಕತೆ 1,85,000 ಟನ್ನುಗಳು. ನಿರಕ್ಷರ ಕುಕ್ಷಿಗಳು ಹೆಚ್ಚಾಗಿರುವ ಓದುವ ಹವ್ಯಾಸವಿಲ್ಲದ ಈಗಿನ ಪರಿಸ್ಥಿತಿಯಲ್ಲಿಯೆ ಇಷ್ಟು ಕೊರತೆಯಿರುವಾಗ ದೇಶದಲ್ಲಿ ಶೈಕ್ಷಣಿಕ ಅಭಿವೃದ್ದಿಯಾಗುತ್ತ ನಡೆದಂತೆ ಇನ್ನೂ ಕೊರತೆ ಹೆಚ್ಚಬಹುದು. ಈ ಕಾರಣದಿಂದ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಮೂರು ಪತ್ರಿಕಾ ಕಾಗದ ಕಾರ್ಖಾನೆಗಳಿಗೆ ಪರವಾನೆ ಕೊಡಲಾಗಿದ್ದರೂ ಹಿಮಾಚಲ ಪ್ರದೇಶದ ಕಾರ್ಖಾನೆ ಮಾತ್ರ ಸ್ವಲ್ಪ ಪ್ರಗತಿ ಸಾಧಿಸಿದೆ. ನಾಲ್ಕನೆಯ ಯೋಜನೆಯ ಅವಧಿಯಲ್ಲಿ ಸರ್ಕಾರ ಇನ್ನೊಂದು ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಉದ್ದೇಶಿಸಿದ್ದರೂ ಹಿಮಾಚಲ ಪ್ರದೇಶದ ಕಾರ್ಖಾನೆಯನ್ನು ತಾನೇ ನಿರ್ವಹಿಸುವುದಾಗಿ ಇತ್ತೀಚೆಗೆ ಸಾರಿದೆ. ಅಲ್ಲದೆ ನೀಪಾ ನಗರದ ಕಾರ್ಖಾನೆಯ ವಿಸ್ತರಣಕ್ಕೆ ಆದ್ಯ ಗಮನ ಕೊಡಲಾಗಿದೆ.

ನಾಲ್ಕನೆಯ ಯೋಜನೆಯ ಗುರಿ: ನಾಲ್ಕನೆಯ ಯೋಜನೆಯ ಅವಧಿಯಲ್ಲಿ ಸ್ಥಾಪಿತ ಸಾಮಥ್ರ್ಯವನ್ನು 11 ಲಕ್ಷ ಟನ್ನುಗಳಿಗೆ ಏರಿಸುವುದರ ಜೊತೆಗೆ ಉತ್ಪಾದನೆಯನ್ನು 9.6 ಲಕ್ಷ ಟನ್ನುಗಳಿಗೂ ಮೀರಿಸುವ ಗುರಿ ಇದೆ. ಇದಲ್ಲದೆ ವೃತ್ತಪತ್ರಿಕೆಗಳ ಕಾಗದದ ಉತ್ಪಾದನಸಾಮಥ್ರ್ಯವನ್ನು 1.65 ಟನ್ನುಗಳನ್ನು ಮೀರಿಸುವ ಗುರಿಹೊಂದಿದ್ದೇವೆ.

ಕಾಗದದ ಅನುಭೋಗ: ಯಾವುದೊಂದು ದೇಶದ ಜನತೆಯ ತಲಾ ಅನುಭೋಗದ ಮೇಲಿಂದ ಅಲ್ಲಿಯ ಅಭಿವೃದ್ದಿಯ ಮಟ್ಟವನ್ನು ಗುರುತಿಸಬಹುದು. ಜಗತ್ತಿನ ಪ್ರಮುಖ ದೇಶಗಳೊಂದಿಗೆ ಭಾರತದ ತಲಾ ಅನುಭೋಗವನ್ನು ಹೋಲಿಸಿದರೆ ನಾವು ತೀರ ಹಿಂದುಳಿದ್ದೇವೆ ಎಂದು ತಿಳಿಯುತ್ತದೆ. ಅಮೆರಿಕದವರು ನಮ್ಮ 177ರಷ್ಟು, ಬ್ರಿಟಿಷರು 88ರಷ್ಟು ಜಪಾನಿಗಳು 59ರಷ್ಟು ಹೆಚ್ಚು ಕಾಗದ ಬಳಕೆ ಮಾಡುತ್ತಾರೆ. ನಮ್ಮ ಅನುಭೋಗ ಹಾಗೂ ಇತರ ದೇಶಗಳಲ್ಲಿಯ ತಲಾ ಅನುಭೋಗಗಳನ್ನು (1966ರಲ್ಲಿ ಇದ್ದಂತೆ) ಈ ಕೆಳಗಿನ ಅಂಕಿಗಳಿಂದ ಕಂಡುಕೊಳ್ಳಬಹುದು.

 

ದೇಶ

ತಲಾ ಅನುಭೋಗ (ಪೌಂಡುಗಳಲ್ಲಿ)

ಅಮೆರಿP ಸಂಯುಕ್ತಸಂಸ್ಥಾನ

...

530

ಬ್ರಿಟನ್

...

265

ಪಶ್ಚಿಮ ಜರ್ಮನಿ

...

225

ಜಪಾನ್

...

176

ಸೋವಿಯತ್ ದೇಶ

...

46

ಅರಬ್ Uಣgಜ

...

17

ಂಹಳ

...

8

sgv

...

3

 

1966ರ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 64 ಸಾವಿರ ಜನ ಈ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಸುಮಾರು 10 ಸಾವಿರ ಜನ ಕಚ್ಚಾಸಾಮಗ್ರಿಯ ಪೂರೈಕೆಯಲ್ಲಿ ತೊಡಗಿದ್ದರು.

ಆಮದು-ರಫ್ತು: ಭಾರತ ಕೆಲವು ಬಗೆಯ ಕಾಗದಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಇವುಗಳಲ್ಲಿ ಪ್ರಮುಖವಾದುದು ಸಿಗರೇಟ್ ಕಾಗದ.  ಇತ್ತೀಚೆಗೆ ಮುದ್ರಣ ಕಾಗದಕ್ಕೂ ಬೇಡಿಕೆ ಬಂದಿದೆ. ಕಾಗದದ ರಫ್ತುಗಳನ್ನು ಅಭಿವೃದ್ದಿಗೊಳಿಸಲು ಸರ್ಕಾರ ಇದಕ್ಕೆ ಕೊಡುವ ಸಹಾಯದ್ರವ್ಯವನ್ನು 1968ರಲ್ಲಿ 10% ರಿಂದ 15% ಕ್ಕೆ ಹೆಚ್ಚಿಸಿದೆ. 1968-69ರಲ್ಲಿ 5.50 ಕೋಟಿ ರೂಪಾಯಿಗಳನ್ನು ಕಾಗದ ನಿರ್ಯಾತದಿಂದ ಭಾರತ ಸಂಪಾದಿಸಿದೆ. ಭಾರತದಲ್ಲಿ ಪತ್ರಿಕಾ ಕಾಗದ, ಅಂಚೆ ಚೀಟಿಗಳ ಕಾಗದ ಮತ್ತು ಕರೆನ್ಸಿ ನೋಟುಗಳ ಕಾಗದಗಳ ಅಭಾವ ತೀವ್ರವಾಗಿದೆ. ಅಮೆರಿಕ, ಕೆನಡ ಸೋವಿಯತ್ ದೇಶ, ಹಾಲಂಡ್, ಚೆಕೋಸ್ಲವಾಕಿಯ ಹಾಗೂ ಸ್ಕಾಂಡಿನೇವಿಯನ್ ದೇಶಗಳಿಂದ ಭಾರತ ಇವನ್ನು ಪಡೆಯುತ್ತಿದೆ.

ಸಮಸ್ಯೆಗಳು: ಈ ಕೈಗಾರಿಕೆ ತನ್ನ ಅಭಿವೃದ್ಧಿಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖ ಸಮಸ್ಯೆಯೆಂದರೆ ಕಚ್ಚಾಸಾಮಗ್ರಿಯ ಕೊರತೆ, ಮುಖ್ಯವಾಗಿ ಈ ಕೈಗಾರಿಕೆ ಬಿದಿರನ್ನೇ ಅವಲಂಬಿಸಿದೆ. ಭಾರತದಲ್ಲಿ 20 ಲಕ್ಷ ಟನ್ನುಗಳಷ್ಟು ಬಿದಿರು ಬೆಳೆದರೂ ಕೇವಲ 14 ಲಕ್ಷ ಟನ್‍ಗಳಷ್ಟು ಮಾತ್ರ ಕಾಗದದ ಕೈಗಾರಿಕೆಗೆ ದೊರೆಯುತ್ತವೆ. ಹೀಗಾಗಿ ಕಚ್ಚಾಸಾಮಗ್ರಿಯ ಕೊರತೆ ತೀವ್ರವಾಗಿದೆ. ಆದಕಾರಣ ಇತ್ತೀಚಿಗೆ ಕಬ್ಬಿನ ಸಿಪ್ಪೆ, ಮೃದು ಹಾಗೂ ಕಠಿಣ ಕಟ್ಟಿಗೆಗಳು ಮತ್ತು ಇತರ ವಸ್ತುಗಳಿಂದ ತಿರುಳು ತಯಾರಿಸಿ ಕೈಗಾರಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಬಿದಿರಿನ ಎಕರೆವಾರು ಉತ್ಪನ್ನವೂ ಭಾರತದಲ್ಲಿ ಕಡಿಮೆ-ಒಂದು ಎಕರೆಗೆ ಒಂದು ಟನ್ನು ಮಾತ್ರ. ಜಪಾನಿನಲ್ಲಿ ಎಕರೆಗೆ ನಾಲ್ಕು ಟನ್ನು. ಎಂದರೆ ನಾವು ನಮ್ಮ ಬಿದಿರಿನ ಉತ್ಪನ್ನವನ್ನು ಹೆಚ್ಚಿಸಬೇಕಾಗಿದೆ. ಕಚ್ಚಾಸಾಮಗ್ರಿಯ ಅಪವ್ಯಯವನ್ನು ಶೀಘ್ರವಾಗಿ ತಡೆಗಟ್ಟಬೇಕು. ಅಡವಿಗಳು ರಾಜ್ಯಸರ್ಕಾರಗಳಿಗೆ ಸಂಬಂಧಿದವು. ಕೆಲವು ರಾಜ್ಯ ಸರ್ಕಾರಗಳು ಹೆಚ್ಚು ಆದಾಯ ಗಳಿಸಲು ಅಡವಿಗಳನ್ನು ಕಡಿಯಲು ಗುತ್ತಿಗೆಗೆ ಕೊಟ್ಟಿವೆ. ಗುತ್ತಿಗೆದಾರರಿಗೆ ಕೈಗಾರಿಕೆಯ ಉಳಿಯುವಿಕೆ, ಅಭಿವೃದ್ದಿಗಳ ಬಗ್ಗೆ ಚಿಂತಿಸುವ ಅವಕಾಶವಾದರೂ ಎಲ್ಲಿ? ಹಾಗಾಗಿ ಅಮೂಲ್ಯ ಅರಣ್ಯಸಂಪತ್ತಿನ ಅಪವ್ಯಯ ನಡೆದಿದೆ. ಇದನ್ನು ಶೀಘ್ರವಾಗಿ ನಿಲ್ಲಿಸಬೇಕು. ಅಲ್ಲದೆ ಬಿದಿರು ಹಾಗೂ ಇತರ ಕಚ್ಚಾ ಸಾಮಗ್ರಿಗಳ ಬೆಳೆವಣಿಗೆಗೆ ಯೋಗ್ಯ ಅವಕಾಶ ನಿರ್ಮಿಸಿ, ದೀರ್ಘಕಾಲಕ್ಕಾಗಿ ಒಂದು ನೀತಿಯನ್ನು ರೂಪಿಸುವುದು ಅತ್ಯಗತ್ಯ.

ಸಾಗಾಣಿಕೆಯ ತೊಂದರೆಗಳು ಈ ಕೈಗಾರಿಕೆಯ ಪ್ರಗತಿಗೆ ಅಡ್ಡಿಯಾಗಿವೆ. ಉತ್ಪಾದನವೆಚ್ಚ ಮಿತಿಮೀರಿ ಬೆಳೆಯುತ್ತಿದೆ, ಇದರಿಂದಲೂ ನಿರೀಕ್ಷಿಸಿದ ಪ್ರಗತಿ ಸಾಧ್ಯವಾಗಲಾರದು. ಬಂಡವಾಳದ ಅಭಾವ ಈ ಕೈಗಾರಿಕೆಯನ್ನು ಬಾಧಿಸುತ್ತಿದೆ.  ಮಿತಿಮೀರಿದ ಉತ್ಪಾದನವೆಚ್ಚದಿಂದ ಈಗಿರುವ ಉತ್ಪಾದಕರಿಗೆ ಲಾಭ ಪ್ರಾಪ್ತವಾಗುತ್ತಿಲ್ಲ. ಹಾಗಾಗಿ ಅವರು ಹೆಚ್ಚು ಬಂಡವಾಳ ತೊಡಗಿಸಲಾರರು. ಲಾಭ ಕಡಿಮೆಯಾಗಿ ಹೆಚ್ಚು ಬಂಡವಾಳ ಬೇಕಾಗುವುದರಿಂದ ಹೊಸಬರು ಆಕರ್ಷಿತರಾಗಿರುವುದಿಲ.್ಲ  ಹಾಗಾಗಿ ಬಂಡವಾಳದ ಕೊರತೆ ಕೈಗಾರಿಕೆಗಳ ಅಭಿವೃದ್ಧಿಗೆ ಅಡಚಣೆಯಾಗಿದೆ.

 ಕರ್ಣಾಟಕದಲ್ಲಿ ಕಾಗದ ಕಾರ್ಖಾನೆಗಳು: ದಿ ಮೈಸೂರ್ ಪೇಪರ್ ಮಿಲ್ಸ್ ಲಿಮಿಟೆಡ್, ಭದ್ರಾವತಿ; ದಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಲಿಮಿಟೆಡ್, ದಾಂಡೇಲಿ; ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್ ಲಿಮಿಟೆಡ್, ಬೆಳಗೊಳ; ದಿ ಸೌತ್ ಇಂಡಿಯ ಪೇಪರ್ ಮಿಲ್ಸ್ ಲಿಮಿಟೆಡ್, ನಂಜನಗೂಡು-ಇವು ಕರ್ಣಾಟಕದ ಕಾಗದ ಕಾರ್ಖಾನೆಗಳು. ಇವುಗಳಲ್ಲಿ ಅತ್ಯಂತ ಹಳೆಯದು ಭದ್ರಾವತಿಯ ಕಾರ್ಖಾನೆ. ಡಾಂಡೇಲಿಯದು ಅತ್ಯಂತ ದೊಡ್ಡದು.

(ಆರ್.ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ